ಹೊನ್ನಾವರ: ತಾಲೂಕಿನ ಗುಣವಂತೆಯಲ್ಲಿ 13ನೇ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಶುಕ್ರವಾರದಂದು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಶುದ್ಧ ಕನ್ನಡ ಬಳಸುವ ನಾಡಿನ ವಿಶಿಷ್ಟ ಕಲೆ ಯಕ್ಷಗಾನವಾಗಿದೆ. ಕೆರೆಮನೆ ಇಡೀ ಕುಟುಂಬ 4 ತಲೆಮಾರಿನ ಮೂಲಕ ಯಕ್ಷಗಾನವನ್ನು ಆರಾಧಿಸುವ ಮೂಲಕ ಈ ಕ್ಷೇತ್ರಕ್ಕೆ ಹೊಸಮೈಲು ಗಲ್ಲು ಕೊಟ್ಟಿದೆ. ಒಂದು ಕುಟುಂಬ ನಾಲ್ಕನೇ ತಲೆ ಮಾರಿಗೆ ಯಕ್ಷಗಾನವನ್ನು ಮುಂದುವರಿಸಿಕೊಂಡು ಬಂದಿರುವುದು ಅಭಿನಂದನಾರ್ಹವಾಗಿದೆ. ಸಂಸ್ಕೃತಿ, ಭಾಷೆ ಕಲೆ ನಾಗರಿಕ ಸಮಾಜಕ್ಕೆ ಅತಿ ಅಗತ್ಯವಾಗಿದೆ. ಮುಂದಿನ ದಿನದಲ್ಲಿ ಇಲಾಖೆಯು ನಿಮ್ಮ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಲು ಸಿದ್ಧವಿದೆ. ಇದೇ ಪ್ರಥಮ ಬಾರಿಗೆ ಸರಕಾರ ಎರಡು ದಿನಗಳ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನ ಆಯೋಜಿಸಿದೆ ಎಂದರು.
ಕಾರ್ಯಕ್ರಮದ ದಿವ್ಯ ಉಪಸ್ಥಿತಿ ವಹಿಸಿದ್ದ ಚಿತ್ತಾಪುರ ಸಂಸ್ಥಾನದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರು ಆರ್ಶಿವಚನ ನೀಡಿ ಭಾರತದ ಸಂಸ್ಕೃತಿ ತನ್ನದೇ ಆದ ಹಿರಿಮೆ ಹೊಂದಿದೆ. ಸಂಸ್ಕಾರ, ಕಲೆಯನ್ನು ಶಿಕ್ಷಣದ ಜೊತೆಗೆ ಕಲಿತು ಸಮಾಜದ ಉತ್ತಮ ಪ್ರಜೆಯಾಗಬೇಕಿದೆ. ಕಲೆ ಹಾಗೂ ಕಲಾವಿದರ ಪ್ರತಿಭೆ ಗುರುತಿಸಿ ಪೊತ್ಸಾಹಿಸುವ ಮೂಲಕ ಮುಂದಿನ ತಲೆಮಾರಿಗೆ ಕೊಂಡ್ಯೊಯಲು ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸಲಿದೆ. ಕಲಾವಿದರಲ್ಲಿ ಕಲೆಯ ಕುರಿತಾದ ಹುಡುಕಾಟ ಸದಾ ಜಾಗೃತವಾಗಿರಬೇಕು ಎಂದು ನುಡಿದರು.
ಪ್ರಸಕ್ತ ಸಾಲಿನ ಕೆರಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ಚಲನ ಚಿತ್ರನಟ ಅನಂತನಾಗ ಇವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿ, ಹೊನ್ನಾವರ ಎಂದರೆ ಎಲ್ಲಿಲ್ಲದ ಪ್ರೀತಿ ಇದ್ದು, ವಿದ್ಯಾರ್ಥಿ ಇರುವಾಗ ಯಕ್ಷಗಾನ ಅಚ್ಚುಮೆಚ್ಚಾಗಿತ್ತು. ಎಲ್ಲಾ ಪ್ರಶಸ್ತಿಗಳೂ ಅರ್ಹತೆ ಮೂಲಕ ಹೋಗುವುದಿಲ್ಲ. ಹಾಗಾಗಿ ಪ್ರಶಸ್ತಿ ಎಂದರೆ ಭಯ. ಆದರೆ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿಯನ್ನು ಹೆಮ್ಮೆಯಿಂದ ಸ್ವೀಕರಿಸಿದ್ದೇನೆ ಎಂದರು.
ಮಂಡಳಿ ವತಿಯಿಂದ ವಿಶೇಷ ಸನ್ಮಾನ ಸ್ವೀಕರಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಾಂಸ್ಕೃತಿಕ ಮೌಲ್ಯ ಹೆಚ್ಚಿಸಿ ಮುಂದಿನ ತಲೆಮಾರಿಗೆ ಪರಿಚಯಿಸಲು ಕಲೆಯು ಬಹುಮುಖ್ಯವಾಗಿದೆ. 84 ವರ್ಷದ ಸುದೀರ್ಘ ಅವಧಿ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಿದ್ದು, ಆ ಪರಂಪರೆ ಕಾಪಾಡಿಕೊಳ್ಳಲು ತಮ್ಮ ಬದ್ದತೆ ಕಾಪಾಡಿಕೊಳ್ಳಬೇಕಿದೆ. ಇಂದು ಬಡತನದಲ್ಲಿರುವ ಜನರು ಕಲೆಯನ್ನು ಉಳಿಸಲು ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ಇಂದಿನ ಸಮೃದ್ದ ಸ್ಥಿತಿಯಲ್ಲಿ ಕಲೆ ಉಳಿಸುವುದು ಸವಾಲಿನ ಕೆಲಸ. ಸಾಂಸ್ಕೃತಿಕ ಮೌಲ್ಯವನ್ನು ಉಳಿಸಲು ಕಲೆಯನ್ನು ಉಳಿಸಬೇಕು. ಪಠ್ಯದಲ್ಲಿ ಯಕ್ಷಗಾನ ತರಲು ಸಿದ್ಧತೆ ಆಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸುನೀಲ ನಾಯ್ಕ ವಹಿಸಿದ್ದರು. ಸಾಹಿತಿ ಹಾಗೂ ಅಂಕಣಕಾರರಾದ ಭಾಸ್ಕರ್ ರಾವ್, ಹಿರಿಯ ಪತ್ರಕರ್ತರಾದ ಬಿ.ಗಣಪತಿ ನಟ ವಾಗ್ಮಿ ಅನಂತ ಭಟ್ ಹುಳಗೋಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಡಗುಂಜಿ ಮೇಳದ ನಿರ್ದೇಶಕರಾದ ಕೆರಮನೆ ಶಿವಾನಂದ ಹೆಗಡೆ ಸ್ವಾಗತಿಸಿ ಅಭಿನಂದಿಸಿದರು. ಸಭಾ ಕಾರ್ಯಕ್ರಮದ ನಂತರ ಕೇರಳದ ಕಲಾಮಂಡಲ ಸುಕುಮಾರನ್ ತಂಡದಿಂದ ಕಥಕ್ಕಳಿ, ಕಿರಾತಾರ್ಜುನೀಯಂ, ಮನ್ಮಥ ರತಿ ಯಕ್ಷಗಾನ ಮತ್ತು ಭರತನಾಟ್ಯ ರೂಪಕ ಪ್ರದರ್ಶನಗೊಂಡಿತು.