ಸಿದ್ದಾಪುರ: ಸಮಾಜದ ಒಳ್ಳೆಯ ಕೆಲಸಗಳಿಗೆ ಧ್ವನಿಯಾಗಬೇಕಾದದ್ದು ನಮ್ಮ ಕರ್ತವ್ಯ. ಆಶಾಕಿರಣ ಸಂಸ್ಥೆ ಕೇವಲ ಅಂಧ ಮಕ್ಕಳಿಗೆ ಬೆಳಕಾಗದೆ ಸಮಾಜದ ಕಣ್ಣನ್ನು ತೆರೆಸಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಸುನೀಲಕುಮಾರ್ ಹೇಳಿದರು.
ಪಟ್ಟಣದ ಹಾಳದಕಟ್ಟಾ ಮುರುಘ ರಾಜೇಂದ್ರ ಅಂಧರ ಶಾಲೆಯ ರಜತ ಮಹೋತ್ಸವದ ಅಂಗವಾಗಿ ನಡೆದ ಜಾನಪದ ಕಲೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಶಾಕಿರಣ ಟ್ರಸ್ಟ್ ಬೆಳ್ಳಿ ಹಬ್ಬದ ಸಂಸ್ಮರಣ ಭವನದ ಶಂಕುಸ್ಥಾಪನೆ ನೆರವೇರಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಅಂಗವಿಕಲರಿಗೆ ಸಮಾಜದ ಮಧ್ಯೆ ಎದ್ದು ನಿಲ್ಲಲು ಆತ್ಮವಿಶ್ವಾಸ ತುಂಬುವ ಕಾರ್ಯ ಮುಖ್ಯವಾದದ್ದು. ಈ ಕೆಲಸವನ್ನು ಆಶಾಕಿರಣ ಟ್ರಸ್ಟ್ ಅತ್ಯಂತ ಯಶಸ್ವಿಯಾಗಿ ಮಾಡುತ್ತಿದೆ. ಒಳ್ಳೆಯ ಕೆಲಸ ಮಾಡುವವರ ಪ್ರಭಾವ ಸಮಾಜದ ಮೇಲಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಚಲನಚಿತ್ರ ನಟ ಡಾ.ಶ್ರೀನಾಥ್, ದಿ.ಅರವಿಂದ್ ಪಿತ್ರೆಅ ವರ ಫೋಟೋ ಅನಾವರಣ ಮಾಡಿದರು. ಅತಿಥಿಗಳಾಗಿ ಕವಿ ಬಿ.ಆರ್.ಲಕ್ಷ್ಮಣರಾವ್, ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಉಪಸ್ಥಿತರಿದ್ದು ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ರವಿ ಹೆಗಡೆ ಹೂವಿನಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಗೌರವ ಕಾರ್ಯದರ್ಶಿಗಳಾದ ಕೇಶವ ಶಾನುಭಾಗ್ ದಂಪತಿಗಳಿಗೆ ಮತ್ತು ಅಂಧ ಮಕ್ಕಳ ಶಾಲೆಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಸಿ.ಎಸ್.ಗೌಡರ್, ಖಜಾಂಚಿ ನಾಗರಾಜ ದೋಶೆಟ್ಟಿ ಹಾಗೂ ಟ್ರಸ್ಟಿಗಳು ಉಪಸ್ಥಿತರಿದ್ದರು.