ಕಾರವಾರ: ನೌಕಾನೆಲೆಗೂ ಮೊದಲು ಮೀನುಗಾರರು ಕಡಲತೀರದ ರಕ್ಷಣೆ ಮಾಡುತ್ತಿದ್ದರು. ಆದರೆ ಇದೇ ಮೀನುಗಾರರಿಗೆ ದೇಶದ ರಕ್ಷಣೆ ಹೆಸರಲ್ಲಿ ನೌಕಾನೆಲೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನುಗಾರರು ದೇಶದ ರಕ್ಷಕರಂತೆ. ಸಮುದ್ರದಲ್ಲಿ ಆಕ್ರಮಣಕಾರರ ಬಗ್ಗೆ ಮೊದಲೆಲ್ಲ ಮೀನುಗಾರರೇ ಮಾಹಿತಿ ನೀಡುತ್ತಿದ್ದರು. ರಕ್ಷಣಾ ಪಡೆಗಳು ಇಲ್ಲದಾಗ ಮೀನುಗಾರರು ದೇಶದ ರಕ್ಷಣೆ ಮಾಡಿದ್ದಾರೆ. ಆದರೆ ಇತ್ತೀಚಿಗೆ ನೌಕಾಪಡೆಯ ಅಧಿಕಾರಿಗಳು ಕಾರವಾರದಿಂದ ಭಟ್ಕಳದವರೆಗಿನ ಮೀನುಗಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಜಿಲ್ಲಾಡಳಿತ, ನೌಕಾನೆಲೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಇಲ್ಲ ಎಂದು ದೂರಿದರು.
ಮೀನುಗಾರರು ಜೀವನ ನಡೆಸುವುದಕ್ಕಾಗಿ ಸಮುದ್ರಕ್ಕೆ ಹೋಗುತ್ತಿದ್ದಾರೆ. ಆದರೆ ಹವಾಮಾನ ವೈಪರೀತ್ಯವಾದಾಗ ಸೀಬರ್ಡ್ ವ್ಯಾಪ್ತಿಯಲ್ಲಿ ರಕ್ಷಣೆ ಪಡೆಯಲು ತೆರಳಿದಾಗ ಮೀನುಗಾರರನ್ನ ನೌಕಾಪಡೆಯವರು ಭಯೋತ್ಪಾದಕರಂತೆ ನೋಡುತ್ತಿರುವುದು ಅಕ್ಷಮ್ಯ. ನೌಕಾನೆಲೆಯ ಅಧಿಕಾರಿಗಳು ಗನ್‌ನಲ್ಲಿ ಮೀನುಗಾರರನ್ನು ಹೆದರಿಸುತ್ತಿದ್ದಾರೆ. ಮೀನುಗಾರರು ಈಗಾಗಲೇ ರಾಜ್ಯ, ಕೇಂದ್ರಗಳ ನೀತಿಯಿಂದಾಗಿ ಬಹಳ ಸಂಕಷ್ಟದಲ್ಲಿದ್ದಾರೆ. ಈ ನಡುವೆ ದೇಶದ ರಕ್ಷಣೆ ಹೆಸರಿನಲ್ಲಿ ನಿರ್ಮಾಣವಾಗಿರುವ ಸೀಬರ್ಡ್ ನೌಕಾನೆಲೆಯ ಅಧಿಕಾರಿಗಳು ಮೀನುಗಾರರಿಗೆ ರಕ್ಷಣೆ ನೀಡದೆ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಇಂಥ ಸಮಸ್ಯೆಗಳನ್ನ ಕೇಳಲು, ಸ್ಥಳೀಯರೊಂದಿಗೆ ಸಮನ್ವಯ ಸಾಧಿಸಲು ಕನ್ನಡದ ಅಧಿಕಾರಿ ಒಬ್ಬರೂ ಸೀಬರ್ಡ್ನಲ್ಲಿ ಇಲ್ಲದಿರುವುದು ದುರಂತ. ಶೀಘ್ರವೇ ನೌಕಾನೆಲೆಯೊಳಗೆ ಕನ್ನಡದ ಅಧಿಕಾರಿಯನ್ನ ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.
ದೇಶಕ್ಕಾಗಿ ತ್ಯಾಗ ಮಾಡಲು ನಾವು ಸಿದ್ಧರಾಗಿದ್ದೇವೆ. ಆದರೆ ಇದೇ ತ್ಯಾಗಕ್ಕೆ ಬಳುವಳಿಯಾಗಿ ಮೀನುಗಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ರಕ್ಷಣಾ ಇಲಾಖೆ ಮಧ್ಯಸ್ಥಿಕೆ ವಹಿಸಿ ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು. ನಾವು ನೌಕಾನೆಲೆಯ ವಿರುದ್ಧವೇ ಹೋರಾಡಬೇಕಾದ ಅನಿವಾರ್ಯತೆಯನ್ನ ಅಧಿಕಾರಿಗಳು ತಂದಿಟ್ಟಿದ್ದಾರೆ. ಜಿಲ್ಲಾಡಳಿತ ಮೀನುಗಾರರು ಹಾಗೂ ನೌಕಾನೆಲೆಯ ಅಧಿಕಾರಿಗಳ ಸಭೆ ನಡೆಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೀನುಗಾರರ ಮುಖಂಡರು ಹಾಗೂ ಸ್ಥಳೀಯರೊಡಗೂಡಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಗೆ ಸಜ್ಜಾಗಲಿದೆ ಎಂದು ಎಚ್ಚರಿಕೆ ನೀಡಿದರು.