ಮುಂಡಗೋಡ: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಇಲ್ಲಿನ ಮಾರಿಕಾಂಬಾ (ದ್ಯಾಮವ್ವ) ದೇವಿ ಜಾತ್ರಾ ರಥೋತ್ಸವವು ಬುಧವಾರ ವಿಜೃಂಭಣೆಯಿಂದ ಜರುಗಿತು.
ಬುಧವಾರ ಬೆಳಿಗ್ಗೆ ಪೂಜಾ ಕೈಕಂರ್ಯಗಳನ್ನು ಪೂರೈಸಿ ಯಲ್ಲಾಪುರ ತಾಲೂಕಿನ ಮಂಚಿಕೇರಿ ಕುಂಬಾರಕುಳಿ ಗ್ರಾಮದ ವೇದಮೂರ್ತಿ ಲಕ್ಷ್ಮಿನಾರಾಯಣ ಭಟ್ಟ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನದ 21 ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹಾಜರಿದ್ದರು. ಸಹಸ್ರಾರು ಭಕ್ತರ ದಂಡು ಶ್ರೀಮಾರಿಕಾಂಬೆ ದೇವಿಯನ್ನು ಹೊತ್ತ ರಥವನ್ನು ಎಳೆದು ದೇವಿಯ ಕೃಪಾಕಟಾಕ್ಷಕ್ಕೊಳಗಾದರು.
ರಥೋತ್ಸವದ ಬೀದಿಯ ತುಂಬ ಭಕ್ತರು ಜನಸಾಗರದಂತೆ ನೆರೆದಿದ್ದರೆ, ಜೋಗಮ್ಮಗಳು ದೇವಿಗೆ ಚಾಮರ ಬೀಸುತ್ತಿದ್ದರು. ಬಾಜಾ ಭಜಂತ್ರಿ, ಲಮಾಣಿ ಲಾವಣಿ, ಗೌಳಿಗರ ನೃತ್ಯ, ಚಿತ್ರ- ವಿಚಿತ್ರ ಗೊಂಬೆಗಳು, ಚಂಡೆ ವಾದ್ಯ, ನೃತ್ಯ ಮತ್ತು ವೇಷಭೂಷಣಗಳ ಜೊತೆಗೆ ಮುಂತಾದ ಸಾಂಸ್ಕೃತಿಕ ವೈಭವಗಳೊಂದಿಗೆ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಉಧೋ ಉಧೋ ಉಧೋ ಎಂಬ ಘೋಷಣೆಗಳು ಮೊಳಗಿತು. ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತುತ್ತಿ ಎಸೆದು ಕೃತಾರ್ಥರಾದರು.
ಹಣ್ಣು- ಕಾಯಿ ಸೇವೆ ಆರಂಭ:
ಚೌತಮನೆಯಲ್ಲಿ ವೀರಾಜಮಾನಳಾದ ದೇವಿಗೆ ಬುಧವಾರದವರೆಗೆ ಯಾವುದೇ ಹಣ್ಣು- ಕಾಯಿ ಸೇವೆಗೆ ಸಂಪ್ರದಾಯದಂತೆ ಅವಕಾಶ ನೀಡಿರಲಿಲ್ಲ. ಗುರುವಾರದಿಂದ 7 ದಿನಗಳವರೆಗೆ ಹಣ್ಣು- ಕಾಯಿ ಪೂಜೆಗೆ ಚಾಲನೆ ದೊರೆತಿದ್ದು, ಮೊದಲ ದಿನ ದೇವಿಗೆ ಪೂಜೆ ಸಲ್ಲಿಸಲು ಭಕ್ತರು ಬೆಳಗ್ಗಿಯಿಂದಲೇ ಸರದಿ ಸಾಲಿನಲ್ಲಿ ಆಗಮಿಸುತ್ತಿದ್ದರು. ಇನ್ನು ಕೆಲ ಭಕ್ತರು ದೇವಿಗೆ ಹರಕೆ ಪೂರೈಸಲು ಕುರಿ, ಕೋಳಿಗಳನ್ನು ತಂದು ದೇವಿಗೆ ತೋರಿಸಿ ಒಯ್ಯುತ್ತಿದ್ದರು.