ಗೋಕರ್ಣ: ಉತ್ತಮ ಆರೋಗ್ಯದೊಂದಿಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ. ನಕಾರಾತ್ಮಕ ಯೋಚನೆಗಳು ಮಾನಸಿಕವಾಗಿ ದುರ್ಬಲಗೊಳಿಸಿದರೆ, ಸಕಾರಾತ್ಮಕ ಯೋಚನೆಗಳು ಸಂಕಷ್ಟ ಸಂದರ್ಭಗಳಲ್ಲಿಯೂ ಬದುಕುವುದನ್ನು ಕಲಿಸಿಕೊಡುತ್ತದೆ ಎಂದು ಕಾರವಾರದ ಕ್ಲಿನಿಕಲ್ ಸೈಕೋಲಾಜಿಸ್ಟ್ ಲತಾ ನಾಯ್ಕ ಹೇಳಿದರು.
ಆರೋಗ್ಯ ಇಲಾಖೆ ಕಾರವಾರ ಹಾಗೂ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು. ಹದಿಹರೆಯದಲ್ಲಿ ಮಾನಸಿಕ ಬದಲಾವಣೆ, ದೈಹಿಕ ಬದಲಾವಣೆ, ಹಾರ್ಮೋನುಗಳ ಉತ್ಪತ್ತಿ, ಆಕರ್ಷಣೆ ಉಂಟಾಗುತ್ತದೆ. ಇದನ್ನು ಹದಿಹರೆಯದಲ್ಲಿ ನಿಯಂತ್ರಿಸಿದರೆ ಉತ್ತಮ ಆರೋಗ್ಯದೊಂದಿಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಹೊನ್ನಪ್ಪ ನಾಯಕ, ವಿದ್ಯಾರ್ಥಿಗಳಿಗೆ ನೀತಿ ಪ್ರಧಾನವಾದ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಅತೀ ಪ್ರಮುಖ ಅಂಶವೇ ಧನಾತ್ಮಕತೆ. ಎಲ್ಲಾ ಒಳ್ಳೆಯ ಆಲೋಚನೆಗಳಿಗೆ ಶ್ರೇಷ್ಠ ಕೆಲಸಗಳಿಗೆ ಮೂಲ ಆಧಾರ ಧನಾತ್ಮಕ ಚಿಂತನೆ. ಕಾರ್ಯಕ್ರಮದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಸೆಕ್ರೆಟರಿ ಮೋಹನ ಕೆರೆಮನೆ, ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ, ಹಿರೇಗುತ್ತಿ ಹಾಸ್ಪಿಟಲ್ನ ಬಿ.ಪಿ ಪಟಗಾರ, ರತನ ನಾಯ್ಕ, ಅಡಿವೆಪ್ಪ ಮಳಗಲಿ, ಶಿಕ್ಷಕರಾದ ಬಾಲಚಂದ್ರ ಹೆಗಡೇಕರ್, ಎನ್.ರಾಮು.ಹಿರೇಗುತ್ತಿ, ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಅಡಿಗೋಣ, ಇಂದಿರಾ ನಾಯಕ, ಮಹಾದೇವ ಗೌಡ, ಜಾನಕಿ ಗೊಂಡ, ಶಿಲ್ಪಾ ನಾಯಕ, ಮದನ ನಾಯಕ, ಕವಿತಾ ಅಂಬಿಗ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಉಪಸ್ಥಿತರಿದ್ದರು.
ನಾಗಶ್ರೀ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿದ್ಯಾರ್ಥಿ ಪ್ರತಿನಿಧಿ ಎಮ್.ಜಿ.ನಾಗಭೂಷಣ ಸರ್ವರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ಕಾಂಚಿಕಾ ನಾಯಕ ನಿರೂಪಣೆ ಮಾಡಿದರು. ವಿದ್ಯಾರ್ಥಿ ವಿಜೇತ ಗುನಗಾ ವಂದಿಸಿದರು. ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮ ಪ್ರಯೋಜನ ಪಡೆದುಕೊಂಡರು.