ಕಾರವಾರ: ತಾಲೂಕಿನ ಸಿದ್ದರ ಶ್ರೀಮಲ್ಲಿಕಾರ್ಜುನ ಪದವಿಪೂರ್ವ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡ ಜಿ.ಡಿ.ಮನೋಜೆ ಅವರನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಕಾರ್ಯಾಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನಿಟ್ಟೂರು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹನುಮಂತಪ್ಪ ಅವರು ಈ ವೇಳೆ ನೂತನ ಪ್ರಾಚಾರ್ಯರಾಗಿ ಅಧಿಕಾರವಹಿಸಿಕೊಂಡ ಜಿ.ಡಿ.ಮನೋಜೆ ಅವರನ್ನು ಅಭಿನಂದಿಸಿ, ಮಲ್ಲಿಕಾರ್ಜುನ ಪದವಿಪೂರ್ವ ಕಾಲೇಜಿನಲ್ಲಿ ಸುದೀರ್ಘ 32 ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸುವ ಮೂಲಕ ಜಿ.ಡಿ.ಮನೋಜೆ ಅವರು ಕಾಲೇಜಿನ ಆಡಳಿತ ಮಂಡಳಿ ಹಾಗೂ ಅನೇಕ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಅತ್ಯಂತ ಸರಳ, ಸಜ್ಜನಿಕೆಯ ಸಂಘಜೀವಿಯಾಗಿರುವ ಇವರು ನಮ್ಮ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದ್ದಾರೆ ಎಂದು ಶ್ಲಾಘಿಸಿದರು.
ಗೋಕರ್ಣ ಭದ್ರಕಾಳಿ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಸಿ.ಜಿ.ನಾಯಕ್ ದೊರೆ ಮಾತನಾಡಿ, ಜಿ.ಡಿ.ಮನೋಜೆಯವರು ಸುಮಾರು ಹತ್ತು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಅನೇಕ ಸಮಾಜಮುಖಿ ಕಾರ್ಯಕ್ರಮ ಮಾಡಿ ಇಡೀ ಜಿಲ್ಲೆಯಲ್ಲಿ ಚಿರಪರಿಚಿತರಾದ ಒಬ್ಬ ಹೃದಯವಂತ, ಧೀಮಂತ ವ್ಯಕ್ತಿಯಾಗಿದ್ದಾರೆ. ಇಂಥ ಅಪರೂಪದ ವ್ಯಕ್ತಿ ನಮಗೆ ಸಿಕ್ಕಿರುವುದು ನಮ್ಮೆಲ್ಲರ ಸುದೈವ. ಅವರ ಸೇವಾವಧಿಯೂ ಯಾವುದೇ ಅಡೆತಡೆ ಇಲ್ಲದೆ ಮುಗಿಯಲಿ. ದೇವರು ಅವರಿಗೆ ಹಾಗೂ ಅವರ ಕುಟುಂಬದ ಸರ್ವರಿಗೂ ಸುಖ- ಶಾಂತಿ, ನೆಮ್ಮದಿ, ಆಯುಷ್ಯ, ಆರೋಗ್ಯ, ಸಂಪತ್ತು ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕುಮಟಾದ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಸತೀಶ್ ಬಿ.ನಾಯ್ಕ, ಗೋಕರ್ಣ ಭದ್ರಕಾಳಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರಾಜಶೇಖರ ಬಾಗೇವಾಡಿ, ಡಿಡಿಪಿಯು ಕಾರ್ಯಾಲಯದ ಸರ್ವ ಸಿಬ್ಬಂದಿ ಹಾಜರಿದ್ದರು.