ಕುಮಟಾ: ಗಂಗಾವಳಿ- ಮಂಜುಗುಣಿ ಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಸ್ಥಳೀಯರಿಗೆ ಕಿರಿಕಿರಿಯುಂಟಾಗುತ್ತಿದ್ದು, ಕಾಮಗಾರಿ ಸ್ಥಳದಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ರ‍್ಯಾಂಪ್ ಅಳವಡಿಸಲು ಒತ್ತಾಯಿಸಿ ಕರವೇ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಭಾಸ್ಕರ ಪಟಗಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಳೆದ ಎರಡು ತಿಂಗಳ ಹಿಂದೆ ಸ್ಥಳೀಯರೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಹೋರಾಟ ಮಾಡಿದಾಗ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಕೆಆರ್‌ಡಿಸಿಎಲ್ ಹಾಗೂ ಗುತ್ತಿಗೆ ಪಡೆದ ಡಿಎನ್‌ಆರ್ ಕಂಪನಿಯ ಅಧಿಕಾರಿಗಳು, 15 ದಿನದೊಳಗಾಗಿ ಸ್ಥಳೀಯರಿಗೆ ಹಾಗೂ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸರಿಯಾದ ದೋಣಿಯ ಸಂಪರ್ಕವಿಲ್ಲದೆ ಪರೆದಾಡುತ್ತಿರುವುದನ್ನ ಅರಿತು ತಾತ್ಕಾಲಿಕವಾಗಿ ಸೇತುವೆ ಮೇಲೆ ಮಂಜುಗುಣಿಯಿಂದ ಗಂಗಾವಳಿಗೆ ತಿರುಗಾಡಲು ರ‍್ಯಾಂಪ್ ಅಳವಡಿಸಿಕೊಡುತ್ತೇವೆ ಎಂದು ಲಿಖಿತವಾಗಿ ಭರವಸೆ ನೀಡಿದ್ದರು. ಆದರೆ ತಂದಿರುವ ರ‍್ಯಾಂಪನ್ನು ಇನ್ನೂ ತನಕ ಅಳವಡಿಸದೆ ಬೇಜವಾಬ್ದಾರಿತನ ಮೆರೆಯುತ್ತಿರುವ ಗುತ್ತಿಗೆ ಕಂಪೆನಿಯ ನಡೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ನಾಲ್ಕೈದು ದಿನದೊಳಗೆ ಕಾಮಗಾರಿ ಪ್ರಾರಂಭ ಮಾಡದೇ ರ‍್ಯಾಂಪ್ ಅಳವಡಿಸಿದೇ ಇದ್ದಲ್ಲಿ ಮುಂದಿನ ಬುಧವಾರ ಎಂಟನೇ ತಾರೀಖಿಗೆ ಸಾರ್ವಜನಿಕರ ನೇತೃತ್ವದಲ್ಲಿ ಹೋರಾಟ ಮಾಡುವುದಾಗಿ ಉಪವಿಭಾಧಿಕಾರಿಗಳಿಗೆ ಹಾಗೂ ಗೋಕರ್ಣ ಪೊಲೀಸರಿಗೆ ಕರವೇ ಎಚ್ಚರಿಕೆ ಪತ್ರ ರವಾನಿಸಿದೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ವೆಂಕಟರಮಣ ಬಂಡುಮನೆ, ಅಬ್ದುಲ್ ಖಾದರ್, ಚಂದ್ರಹಾಸ ನಾಯಕ್, ಶ್ರೀನಿವಾಸ್ ನಾಯಕ್, ನಾರಾಯಣಸ್ವಾಮಿ, ಬಂಗಾರಿ ನಾಯಕ್, ಮಂಜುನಾಥ್ ನಾಯಕ್, ರಾಜು ನಾಯಕ್, ರಾಘವೇಂದ್ರ ಗಾವ್ಕರ್, ನಾಗೇಂದ್ರ ಪಡ್ತಿ, ಸೂಫಿ ಸಾಬ್ ಹಾಗೂ ನಾಗು ಹಳ್ಳೇರ ಮತ್ತಿತರರು ಇದ್ದರು.