ಅಂಕೋಲಾ: ತಾಲೂಕಿನ ಅಂಬುಕೋಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಗ್ರಾಮ ಪಂಚಾಯತ ಸದಸ್ಯರಾದ ನಾಗವೇಣಿ, ಕೇಶವ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉದ್ಯಮಿ ನಾಗರಾಜ ನಾಯಕ ಹಿತ್ತಲಮಕ್ಕಿಯವರು ರಜತ ಮಹೋತ್ಸವದ ಸವಿನೆನಪಿಗಾಗಿ ನಿರ್ಮಿಸಿದ ಶಾಲೆಯ ಪ್ರವೇಶ ದ್ವಾರ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿರುವ ಆವರಣ ಗೋಡೆ ಉದ್ಘಾಟಿಸಿ, ದಾಸ್ತಾನು ಕಟ್ಟಡದ ನಿರ್ಮಾಣ ಮಾಡುವ ಭರವಸೆ ನೀಡಿದರು. ಬಹುಮಾನ ವಿತರಕರಾಗಿ ಆಗಮಿಸಿದ ಉದ್ಯಮಿ ಹಾಗೂ ಕುಮಟಾ-ಹೊನ್ನಾವರ ತಾಲೂಕಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಗೋವಿಂದ ಗೌಡ ಹಾಲಕ್ಕಿ ಒಕ್ಕಲಿಗರ ಸಮಾಜದ ಮಕ್ಕಳೇ ಕಲಿಯುತ್ತಿರುವ ಈ ಶಾಲೆ ಇತ್ತು ಎಂಬುದೇ ಗೊತ್ತಿರಲಿಲ್ಲ. ಆದರೆ ಇಂದು ಅಭೂತಪೂರ್ವ ಕಾರ್ಯಕ್ರಮ ಸಂಘಟಿಸಿ, ತಮ್ಮ ಊರಿನ ಕೀರ್ತಿಯ ಜೊತೆಗೆ ಶಾಲೆಯು ಬೆಳಗಲು ಕಾರಣರಾಗಿದ್ದೀರಿ ಈ ಶಾಲೆಗೆ ನನ್ನಿಂದ ಆಗುವ ನೆರವು ನೀಡಲು ಸಿದ್ಧ ಎಂದರು.
ಮಕ್ಕಳ ಕೈ ಬರಹದ ಹೊಂಗಿರಣ ಹಸ್ತಪ್ರತಿ ಬಿಡುಗಡೆ ಮಾಡಿ ಮಾತನಾಡಿದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದಿಶ ಜಿ.ನಾಯಕ ಹೊಸ್ಕೇರಿ, ಶಾಲೆಯ ಕಟ್ಟಡಗಳು ಸುಂದರವಾಗಿದ್ದರೆ ಸಾಲದು, ಅಲ್ಲಿ ಜ್ಞಾನದ ಜೊತೆಗೆ ಹೃದಯಕ್ಕೆ ಮನಸ್ಸಿಗೆ ಸಂಸ್ಕಾರ ದೊರೆಯಬೇಕು. ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ಇಂದು ಹಸ್ತಪ್ರತಿ ಬಿಡುಗಡೆ ಮಾಡಿರುವುದು ರಜತ ಮಹೋತ್ಸವ ಇನ್ನಷ್ಟು ಅರ್ಥಪೂರ್ಣವಾಗಿದೆ ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಮೋಹನ ಎಚ್.ಗೌಡ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲೆಯ ನಿರ್ಮಾಣಕ್ಕೆ ಶ್ರಮಿಸಿದ ದಿ. ದೇವು ಹೊಲಿಯಪ್ಪ ಗೌಡ, ಶಾಲೆಯ ಕಟ್ಟಡಕ್ಕೆ ಭೂದಾನ ಮಾಡಿದ ದಿ. ಮಂಕಾಗಿ ನಾರಾಯಣ ಗೌಡ ಅವರ ಪರವಾಗಿ ಅವರ ಮಕ್ಕಳನ್ನು ಸನ್ಮಾನಿಸಲಾಯಿತು. ಶಾಲೆಯ ನಿರ್ಮಾಣಕ್ಕೆ ಶ್ರಮಿಸಿದ ಮಹಾದೇವ ತುಳಸು ಗೌಡ, ಸುರೇಶ ಪಿ. ಗೌಡ, ನೀಲಕಂಠ ಜಟ್ಟು ಗೌಡ ಮತ್ತು ಶಾಂತಿ ಎಚ್. ಗೌಡ ಇವರನ್ನು ಶಾಲೆಯಲ್ಲಿ ಹಿಂದೆ ಕರ್ತವ್ಯ ನಿರ್ವಹಿಸಿದ ಶಿಕ್ಷಕ ಗೌರೀಶ ನಾಯಕ, ಚಂದ್ರಹಾಸ ನಾಯಕ, ಪಾರ್ವತಿ ನಾಯಕ, ನಾಗವೇಣಿ ನಾಯಕ ಮತ್ತು ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಎಸ್.ಡಿ.ಎಂ.ಸಿ ಅಧ್ಯಕ್ಷ ಮೋಹನ ಗೌಡ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯೋಪಾಧ್ಯಾಯ ವೆಂಕಟೇಶ ನಾರಾಯಣ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಸಹಶಿಕ್ಷಕಿ ಪಾರ್ವತಿ ಪಟಗಾರ ಸ್ವಾಗತಿಸಿದರು. ಗಣಪತಿ ಗೌಡ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಉತ್ತರ ಕನ್ನಡ ಜಿಲ್ಲೆಯ ನುರಿತ ಕಲಾವಿದರಿಂದ ‘ಸೀತಾ ವಿಯೋಗ’ ಮತ್ತು ‘ಲವಕುಶ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.