ಭಟ್ಕಳ: ದೇವರ ಸನ್ನಿಧಾನಕ್ಕೆ ಬರುವಾಗ ಶುದ್ಧ ಮನಸ್ಸು, ಸೇವಾ ಮನೋಭಾವನೆಯಿಂದ ಬಂದರೆ ಖಂಡಿತ ಉತ್ತಮ ಫಲ ಸಿಕ್ಕೇ ಸಿಗುತ್ತದೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ನುಡಿದರು.
ಕಿತ್ರೆ ಶ್ರೀ ಕ್ಷೇತ್ರ ದೇವಿಮನೆಯ ಶ್ರೀ ದುರ್ಗಾಪರಮೇಶ್ವವರಿ ದೇವಸ್ಥಾನದಲ್ಲಿ ವರ್ಧಂತಿ ಮತ್ತು ಮಹಾರಥೋತ್ಸವದ ಪ್ರಯುಕ್ತ ಏರ್ಪಡಿಸಲಾದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಪ್ರತಿಯೊಬ್ಬರು ಒಳ್ಳೆಯ ಮನಸ್ಸಿನಿಂದ ದೇವರ ಪ್ರೀತ್ಯರ್ಥವಾಗಿ ಸೇವೆ ಮಾಡಬೇಕು. ವರ್ಷಂಪ್ರತಿ ನಡೆಸುವ ವರ್ಧಂತಿ ಎಂದರೆ ಹೊಸತನ ಎಂದರ್ಥ. ಹೊಸತನ ಮೂಡಲಿ ಎನ್ನುವ ಉದ್ದೇಶದಿಂದ ಪ್ರತಿಷ್ಠಾಪನೆಯ ನೆನಪಿಗಾಗಿ ವರ್ಧಂತಿ ನಡೆಸಲಾಗುತ್ತಿದೆ. ದೇವಿಮನೆಯಲ್ಲಿ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ವರ್ಷಕ್ಕೊಂದು ಸೇವೆ ಸಮರ್ಪಣೆಯಾಗುತ್ತಿರುವುದು ಸಂತಸ ತಂದಿದೆ. ದೇವಸ್ಥಾನಕ್ಕೆ ಅತೀ ಅಗತ್ಯವಾದ ಮಹಾದ್ವಾರವನ್ನು ಶಾಸಕ ಸುನೀಲ ನಾಯ್ಕ ತಮ್ಮ ವಯಕ್ತಿಕ ಖರ್ಚಿನಲ್ಲಿ ನಿರ್ಮಿಸಿರುವುದು ಶ್ಲಾಘನೀಯ. ಬದುಕಿಗೆ ಚೌಕಟ್ಟು ಅಗತ್ಯ. ಚೌಕಟ್ಟಿನಲ್ಲಿ ಬದುಕಿದರೆ ಏನೂ ತೊಂದರೆ, ಸಮಸ್ಯೆ ಉಂಟಾಗುವುದಿಲ್ಲ. ದೇವಸ್ಥಾನ, ಶ್ರದ್ಧಾಭಕ್ತಿ ಕೇಂದ್ರಗಳಲ್ಲಿ ಕೆಟ್ಟಬುದ್ಧಿ, ದುಶ್ಚಟ, ಕ್ಲೇಶ, ಸಂಘರ್ಷ ಬಿಟ್ಟು ಒಗ್ಗಟ್ಟಿನಿಂದ ಸೇವೆ ಮಾಡಬೇಕು ಎಂದರು.
ದೇವಿಮನೆಯಲ್ಲಿ ಸದಾ ಸಂಗೀತ ಸೇವೆ ನಡೆಸುವಂತಾಗಬೇಕು. ದೇವಸ್ಥಾನದ ಹೊರಗಷ್ಟೇ ಸಂಗೀತ ನಡೆಸದೇ ದೇವಸ್ಥಾನದ ಅಂತರಾಳದಲ್ಲೂ ಸಂಗೀತ ಸೇವೆ ಸದಾ ನಡೆಸಬೇಕು. ದೇವಿಮನೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವೈಭವ ಕಾಣುವಂತಾಗಬೇಕು ಎಂದರು.
ಶಾಸಕ ಸುನೀಲ ನಾಯ್ಕ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಗೆ ಕೈಜೋಡಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೆ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ದೇವಸ್ಥಾನದ ಮೊಕ್ತೇಸರ ಉಮೇಶ ಹೆಗಡೆ ಅವರು ಸಭಾ ಪೂಜೆ ನೆರವೇರಿಸಿ, ಸ್ವಾಗತಿಸಿದರೆ, ಗಣೇಶ ಹೆಬ್ಬಾರ ಮುಡ್ಲಿಕೇರಿ ವರದಿ ವಾಚಿಸಿದರು.
ಭವತಾರಿಣಿ ಪರಿಷತ್‌ನ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು ವಂದಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಪಶ್ಚಿಮಘಟ್ಟಗಳ ಸಂರಕ್ಷಣಾ ಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ದೇವಸ್ಥಾನದಲ್ಲಿ ಮಹಾರಥೋತ್ಸವ ವಿಜ್ರಂಭಣೆಯಿoದ ನಡೆಯಿತು. ಶಾಸಕ ಸುನೀಲ ನಾಯ್ಕ ನಿರ್ಮಿಸಿಕೊಟ್ಟ ಮಹಾದ್ವಾರವನ್ನು ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಲೋಕಾರ್ಪಣಗೊಳಿಸಿದರು.