ಅಂಕೋಲಾ : ವಿದ್ಯುತ್ ಖಾಸಗೀಕರಣ ಮತ್ತು ಕೃಷಿ ಪಂಪ್ಸೆಟ್ಗಳಿಗೆ ಫ್ರಿ ಪೇಯ್ಡ್ ಮೀಟರ್ ಅಳವಡಿಕೆ ವಿರೋಧಿಸಿ ಫೆ.1ರಂದು ಬೆಳಿಗ್ಗೆ 10 ಗಂಟೆಗೆ ತಾಲೂಕು ಮಟ್ಟದ ನೀರಾವರಿ ಪಂಪಸೆಟ್ ವಿದ್ಯುತ್ ಬಳಕೆದಾರ ರೈತರ ಸಮಾವೇಶ ಪಟ್ಟಣದ ಕೆಎಲ್ಇ ಟಿಸಿಎಚ್ ಸಭಾಂಗಣದಲ್ಲಿ ನಡೆಯಲಿದೆ.
ಈ ಸಮಾವೇಶ ಉದ್ಘಾಟಿಸಲು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಆಗಮಿಸಲಿದ್ದಾರೆ. ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ ಸಮಾವೇಶದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ, ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ತಿಲಕ ಗೌಡ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಜಿ.ಎಂ. ಶೆಟ್ಟಿ ಮತ್ತು ಜಿಲ್ಲೆಯ ಬೇರೆ ಬೇರೆ ತಾಲೂಕಿನ ರೈತ ಮುಖಂಡರು ಹಾಜರಾಗಲಿದ್ದಾರೆ.
ಆಧುನಿಕ ಆರ್ಥಿಕತೆಯಲ್ಲಿ ವಿದ್ಯುಚ್ಛಕ್ತಿ ವಲಯವು ಒಂದು ಬಹಳ ಮಹತ್ವದ ಆಯಕಟ್ಟಿನ ಪಾತ್ರಧಾರಿಯಾಗಿ, ಸೂತ್ರಧಾರಿಯಾಗಿ ಅಭಿವೃದ್ಧಿಯ ಮಾಪಕವೂ ಆಗಿ ಪರಿಗಣಿಸಲ್ಪಟ್ಟಿದೆ. ಯಾವುದೇ ಒಂದು ದೇಶ ಅಭಿವೃದ್ಧಿ ಸಾದಿಸಿರುವ ಮಟ್ಟವನ್ನು ತಲವಾರು ವಿದ್ಯುತ್ ಬಳಕೆಯ ಸ್ಥಿತಿಯಿಂದ ಅಳೆಯಲಾಗುತ್ತದೆ.
ದೇಶದಲ್ಲಿ 1991 ರ ನಂತರ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಧೋರಣೆಯನ್ನು ಅನುಸರಿಸಿದ ಪರಿಣಾಮ ಪ್ರತಿಯೊಂದು ಕ್ಷೇತ್ರದಲ್ಲೂ ಖಾಸಗಿ ಕಾರ್ಪೋರೇಟ್ ಏಕಸ್ವಾಮ್ಯ ಸಾಧಿಸಲು ಅನುಕೂಲ ಕಲ್ಪಿಸುವ ಕಾನೂನುಗಳನ್ನು ನಮ್ಮ ಸರಕಾರಗಳು ಅಂಗೀಕರಿಸುತ್ತ ಬಂದಿವೆ. ಕೇಂದ್ರ ಸರಕಾರವು ವಿದ್ಯುತ್ ವಲಯವನ್ನು ಸಂಪೂರ್ಣವಾಗಿ ಖಾಸಗೀಕರಿಸುವ ಉದ್ದೇಶಕ್ಕಾಗಿ ವಿದ್ಯುತ್ ಮಸೂದೆ-2022 ನ್ನು ಕಳೆದ ಲೋಕಸಭೆ ಅಧಿವೇಶನದಲ್ಲಿ ತರಾತುರಿಯಲ್ಲಿ ಮಂಡಿಸಿದೆ. ದೇಶದ ಆರ್ಥಿಕತೆಯ ಚೈತನ್ಯವಾಗಿರುವ ವಿದ್ಯುತ್ ಕ್ಷೇತ್ರ ಸಂಪೂರ್ಣ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡುವ ವಿದ್ಯುತ್ ಮಸೂದೆ-2022 ಅಂಗೀಕಾರವಾಗಿ ಜಾರಿಯಾದರೆ ದೇಶದ ಸ್ವಾವಲಂಬನೆ ಮತ್ತು ಸಾರ್ವಭೌಮತೆಗೆ ಕೊಡಲಿ ಪೆಟ್ಟು ಬೀಳಲಿದೆ. ರೈತ ಸಂಘಟನೆಗಳು ಮತ್ತು ವಿದ್ಯುತ್ ವಲಯದ ಕಾರ್ಮಿಕರು ಹಾಗೂ ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳು ಸಹ ತೀವೃವಾದ ವಿರೋಧವನ್ನು ವ್ಯಕ್ತಪಡಿಸಿದಾಗಲು ಸರಕಾರ ಸಂಸತ್ತಿನಲ್ಲಿ ಈ ಜನವಿರೋಧಿ ಮಸೂದೆ ಮಂಡಿಸಿದೆ.
ಇದರ ಪರಿಣಾಮ ಕಾರ್ಪೋರೇಟ್ ಬಕಾಸುರರ ಕೈಗೆ ಇಂಧನ ಕ್ಷೇತ್ರ ಹೋಗಲಿದೆ. ರೈತಾಪಿ ಕೃಷಿ ನಾಶ ಮಾಡುವ ಹುನ್ನಾರ ಅಡಗಿದೆ. ಸಾರ್ವಜನಿಕ ವಿದ್ಯುತ್ ರಂಗದ ಸರ್ವನಾಶವಾಗಲಿದೆ. ವಿದ್ಯುತ್ ವಲಯದ ಕಾರ್ಮಿಕರು ಬೀದಿಪಾಲು, ಕಾರ್ಮಿಕರ ಶೋಷಣೆಗೊಳಗಾಗಲಿದ್ದಾರೆ. ಒಕ್ಕೂಟ ತತ್ವ ಗಂಭೀರ ಉಲ್ಲಂಘನೆಯಾಗುತ್ತದೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಸೇರಿ ಸಬ್ಸಿಡಿ ವಿದ್ಯುತ್ ಬಂದಾಗಲಿದೆ. ಇತ್ಯಾದಿ, ಇತ್ಯಾದಿ ಸಂಕಷ್ಟಗಳು ಜನತೆಗೆ ಬರಲಿವೆ.
ಈ ರೈತ ವಿರೋಧಿ ಧೋರಣೆಗಳ ವಿರುದ್ಧ ದೊಡ್ಡ ಪ್ರತಿರೋಧ ಬರಬೇಕಾದ ಹಿನ್ನೆಲೆಯಲ್ಲಿ ಅಂಕೋಲಾ ತಾಲೂಕು ಮಟ್ಟದ ನೀರಾವರಿ ಪಂಪ್ಸೆಟ್ ವಿದ್ಯುತ್ ಬಳಕೆದಾರರ ರೈತರ ಸಮಾವೇಶವನ್ನು ಬುಧವಾರ ತಾಲೂಕಿನ ಕೆ.ಎಲ್.ಇ. ಟಿ.ಸಿ.ಎಚ್. ಹಾಲ್ನಲ್ಲಿ ಬೆಳಿಗ್ಗೆ 10 ಗಂಟೆಗೆ ಸಂಘಟಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕೆಂದು ಕರ್ನಾಟ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಗೌರೀಶ ಟಿ.ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ ಬಾಳೆಗುಳಿ ತಿಳಿಸಿದ್ದಾರೆ.