ಗೋಕರ್ಣ: ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರಹಾಕುವ ಕೆಲಸ ಶಿಕ್ಷಕರಿಂದಾಗಬೇಕು. ಹಾಗಾದಾಗ ವಿದ್ಯಾರ್ಥಿಗಳು ಗುರುಮುಖೇನ ವಿದ್ಯೆ ಕಲಿತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಲು ಹಾಗೂ ರಾಜ್ಯ, ರಾಷ್ಟ್ರಮಟ್ಟದಲ್ಲಿ ತನ್ನ ಪ್ರತಿಭೆ ತೋರಿಸಲು ಸಾಧ್ಯ ಎಂದು ಮಾಜಿ ಶಾಸಕ ಸತೀಶ ಸೈಲ್ ಹೇಳಿದರು.
ಅವರು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ಪಾಲಕರ ಸಭೆ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಗುರಿ ಇಟ್ಟುಕೊಳ್ಳಬೇಕು. ಆ ಗುರಿಯ ಸಫಲತೆಯಲ್ಲಿ ಅವಿರತ ಪ್ರಯತ್ನ ಮುಖ್ಯ. ಹಿರೇಗುತ್ತಿ ಹೈಸ್ಕೂಲಿನ ವಿದ್ಯಾರ್ಥಿಗಳಾದ ಸಾನಿಕಾ ನಾಯ್ಕ, ಸುವರ್ಣಾ ಭಂಡಾರಕರ್ ಶಿಕ್ಷಕರ ಉತ್ತಮ ಮಾರ್ಗದರ್ಶನದಿಂದ ರಾಷ್ಟ್ರಮಟ್ಟದವರೆಗೆ ಹಿರೇಗುತ್ತಿ ಹೈಸ್ಕೂಲಿನ ಕೀರ್ತಿಯನ್ನು ಪಸರಿಸಲಿದ್ದಾರೆ ಎಂದರು.
ಸಿದ್ದರ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಜಿ.ಪಿ.ನಾಯಕ ಮಾತನಾಡಿ, ನನ್ನ ಶೈಕ್ಷಣಿಕ ಬೆಳವಣಿಗೆಗೆ ನಾನು ಕಲಿತ ಶಾಲೆ ಹಿರೇಗುತ್ತಿ ಹೈಸ್ಕೂಲ್ ಗಟ್ಟಿಯಾದ ಸೈದ್ಧಾಂತಿಕವಾದ ನೆಲಗಟ್ಟನ್ನು ಕಟ್ಟಿಕೊಟ್ಟಿದೆ. ಸನ್ಮಾನಿತ ಮಕ್ಕಳು ಪ್ರತಿಭಾ ಸಂಪನ್ನ ಮಕ್ಕಳಾಗಿ ಪಾಲಕರಿಗೆ, ಶಾಲೆಗೆ, ಊರಿಗೆ ಕೀರ್ತಿ ತನ್ನಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಹೊನ್ನಪ್ಪ ಎನ್.ನಾಯಕ ಮಾತನಾಡಿ, ನಮ್ಮ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಶೈಕ್ಷಣಿಕ ಮೂಲಭೂತ ಅಗತ್ಯಗಳನ್ನು, ಕಂಪ್ಯೂಟರ್ ಜ್ಞಾನ, ವಿಜ್ಞಾನ ಪ್ರಯೋಗಾಲಯ, ಪರಿಣಿತ ಅಧ್ಯಾಪಕರ ವೃಂದವನ್ನು ಹೊಂದುವ ಮೂಲಕ ಉತ್ತಮ ವಿದ್ಯಾಸಂಸ್ಥೆಯಾಗಿ ವಿದ್ಯೆ ನೀಡುತ್ತಿದೆ ಎಂದರು.
ಆಡಳಿತ ಮಂಡಳಿಯ ಸದಸ್ಯ ಎನ್.ಟಿ.ನಾಯಕ, ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಜವಬ್ದಾರಿಯೂ ಅತೀ ಮುಖ್ಯ. ಪ್ರಯತ್ನ ಮತ್ತು ಶ್ರದ್ಧೆಯಿಂದ ಎಂತಹ ವಿದ್ಯೆಯನ್ನಾದರೂ ಕರಗತ ಮಾಡಿಕೊಳ್ಳಬಹುದು ಎಂದರು. ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಎಸ್.ಗಾಂವಕರ, ಸುಖಾರ್ಥಿಯಾದವನು ವಿದ್ಯೆಯನ್ನು ಬಿಡಬೇಕು. ವಿದ್ಯಾರ್ಥಿಯಾದವನು ಸುಖವನ್ನು ಬಿಡಬೇಕು, ಸುಖಾರ್ಥಿಯಾದವನಿಗೆ ವಿದ್ಯೆ ಎಲ್ಲಿಂದ? ಮತ್ತು ವಿದ್ಯಾರ್ಥಿಯಾದವನಿಗೆ ಸುಖ ಎಲ್ಲಿಂದ? ಸಮಯ ಮತ್ತು ಗುರಿ ಇವೆರಡೂ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖವಾದದ್ದು ಎಂದರು.
ಪ್ರೀತಿ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿದ್ಯಾರ್ಥಿ ಸುವರ್ಣಾ ಭಂಡಾರಕರ್ ಸರ್ವರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ಶಿವಪ್ರಸಾದ ನಾಯಕ ನಿರೂಪಣೆ ಮಾಡಿದರು. ವಿದ್ಯಾರ್ಥಿ ಎನ್.ಡಿ.ನಂದನಕುಮಾರ ವಂದಿಸಿದರು. ವೇದಿಕೆಯಲ್ಲಿ ರಮಾನಂದ ಪಟಗಾರ, ಹಿರೇಗುತ್ತಿ ಹಾಸ್ಟೆಲ್ ಸೂಪರಿಡೆಂಟ್ ಶ್ಯಾಮಲಾ ನಾಯ್ಕ, ವಿದ್ಯಾರ್ಥಿ ಪಾಲಕ ಪ್ರತಿನಿಧಿಗಳಾದ ಹೊನ್ನಪ್ಪ ನಾಯಕ ಮೊಗಟಾ, ಪ್ರಕಾಶ ನಾಯಕ ಮಳಲಿ, ಮಲ್ಲಿಕಾ ನಾಯಕ, ಸುಭದ್ರಾ ಗೌಡ, ಶಿಕ್ಷಕರಾದ ಬಾಲಚಂದ್ರ ಹೆಗಡೇಕರ್, ಎನ್.ರಾಮು ಹಿರೇಗುತ್ತಿ, ವಿಶ್ವನಾಥ ಬೇವಿನಕಟ್ಟಿ, ಇಂದಿರಾ ನಾಯಕ, ಮಹಾದೇವ ಗೌಡ, ಜಾನಕಿ ಗೊಂಡ, ಶಿಲ್ಪಾ ನಾಯಕ, ಮದನ ನಾಯಕ, ಕವಿತಾ ಅಂಬಿಗ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಇದ್ದರು. ಎಲ್ಲಾ ವಿದ್ಯಾರ್ಥಿ ಪಾಲಕ ವೃಂದದವರು ಉಪಸ್ಥಿತರಿದ್ದರು.