ಸಿದ್ದಾಪುರ: ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿ ಪ್ರಗತಿ ಪರಿಶೀಲಿಸಿದ್ದೇನೆ. ಮಾರ್ಚ ಅಂತ್ಯಕ್ಕೆ ಯಾವುದೇ ಕಾರಣಕ್ಕೂ ಕಾಮಗಾರಿಗಳು ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ. ಅಭಿವೃದ್ಧಿಗಾಗಿ ತಾಲೂಕಿಗೆ ಸಾಕಷ್ಟು ಹಣ ತಂದಿದ್ದೇವೆ. ಆದರೆ ಎಸ್ಟಿಮೇಟ್ ಮಾಡುವುದಕ್ಕೆ ನಮಗೆ ಅಧಿಕಾರಿಗಳಿಲ್ಲ. ಟೆಂಡರ್ ಮಾಡುವುದಕ್ಕೆ ವಿಳಂಬವಾಗುತ್ತಿದೆ. ಟೆಂಡರ್ ಆದರು ಟೆಂಡರ್ ಹಾಕದೆ ಇರುವ ಕಾಮಗಾರಿಗಳ ಪ್ರಮಾಣ ಜಾಸ್ತಿ ಇದೆ.ಅವುಗಳಿಗೆ ರೀ ಟೆಂಡರ್ ಮಾಡುತ್ತಿದ್ದಾರೆ. ಹೀಗಾಗಿ ಮಂಜೂರಾಗಿರುವ ಕೆಲವು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಿಕ್ಕೆ ನಮಗೆ ವಿಳಂಬವಾಗುತ್ತಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಕದ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಬಂದಿದೆ ಎಂಬ ಸುದ್ದಿ ಇದೆ. ಈ ಕುರಿತು ಜನವರಿ 25ರಂದು ತಹಶೀಲ್ದಾರ್ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಒಂದು ಸಭೆಯನ್ನು ಸಹ ಮಾಡಿದ್ದಾರೆ. ಮಂಗನ ಕಾಯಿಲೆ ಬರೆದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು, ಮಂಗನ ಕಾಯಿಲೆಗೆ ಈಗಾಗಲೇ ಬೇಕಾದ ಔಷಧಿಗಳು ನಮ್ಮಲ್ಲಿ ಲಭ್ಯವಿದೆ. ಇನ್ನೇನು ಬೇಕು ಎಂಬ ಬಗ್ಗೆ ಪೂರೈಕ್ಕೆ ಮಾಡಿಕೊಳ್ಳುವಂತೆ, ಆರೋಗ್ಯ ಇಲಾಖೆಗೆ ಸೂಚಿಸಿದ್ದೇನೆ ಎಂದರು,
ಈಗ ಎಲ್ಲಾ ಕಡೆ ಜಾತ್ರೆ, ಉತ್ಸವ, ತೇರುಗಳು ಪ್ರಾರಂಭವಾಗುತ್ತಿದೆ. ಬೇಸಿಗೆ ಕೂಡ ಬರುತ್ತದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಆಗದೆ , ಜನರ ಆರೋಗ್ಯದ ಸಮಸ್ಯೆ ಆಗದಂತೆ ಸ್ವಚ್ಛತೆ ನಿರ್ವಹಿಸುವ ಬಗ್ಗೆ ಸಂಬoಧಪಟ್ಟವರಿಗೆ ಸೂಚಿಸಿದ್ದೇನೆ . ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ತಾಲೂಕಿನಲ್ಲಿ ಜಾನುವಾರುಗಳಿಗೆ ಚರ್ಮಘಂಟು ರೋಗದಿಂದಾಗಿ ನಮ್ಮ ತಾಲೂಕಿನಲ್ಲಿ 48 ದನಗಳು ಸಾವನ್ನಪ್ಪಿವೆ. ಈಗಾಗಲೇ ಮೂರು ಜನರಿಗೆ ಪರಿಹಾರ ಬಂದಿದ್ದು ಉಳಿದವರಿಗೆ ಪರಿಹಾರ ನೀಡುವ ಕ್ರಮ ಜಾರಿಯಲ್ಲಿದೆ. ಸದ್ಯದಲ್ಲಿ ಅವರಿಗೆ ಹಣ ಬರಲಿದೆ. ದನಕರುಗಳಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನನ್ನು ಮಾಡಲಾಗಿದೆ ಎಂದರು.
ಈಗ ಬೇಸಿಗೆ ಇರುವುದರಿಂದ ಅಡಿಕೆ ಎಲೆಚುಕ್ಕೆ ರೋಗ ಕಂಟ್ರೋಲ್ ನಲ್ಲಿದೆ. ಮಳೆಗಾಲದಲ್ಲಿ ತೇವಾಂಶ ಜಾಸ್ತಿಯಾದ ನಂತರ ರೋಗ ಹರಡುವ ಸಾಧ್ಯತೆ ಇದೆ. ಕೇಂದ್ರ ರಾಜ್ಯ ಸರ್ಕಾರ ಮಟ್ಟದಲ್ಲಿ ಈ ಕುರಿತು ಸಂಶೋಧನೆ ಮಾಡಲಾಗುತ್ತಿದೆ. ಆದರೆ ಈ ರೋಗಕ್ಕೆ ನಿಶ್ಚಿತವಾದ ಔಷಧಿ ಮತ್ತು ಆ ರೋಗ ಯಾವುದು ಎಂಬುದರ ಬಗ್ಗೆ ಸ್ಪಷ್ಟತೆಯನ್ನು ವಿಜ್ಞಾನಿಗಳು ಕೊಡಬೇಕು. ಇದೇ ಬರುವ ಫೆ.3ರಂದು ಇಂಧನ ಸಚಿವ ಮತ್ತು ಕನ್ನಡ ಸಂಸ್ಕೃತಿ ಸಚಿವರಾದ ವಿ ಸುನಿಲಕುಮಾರ್ ರವರು ನಮ್ಮ ಅಂಧರ ಶಾಲೆ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಅಂಧರ ಶಾಲೆಯ ಕಾರ್ಯಕ್ರಮ ಮುಗಿದ ನಂತರ 12 ಗಂಟೆಗೆ ಹೆಸ್ಕಾಂ ಫಲಾನುಭವಿಗಳ, ಬೆಳಕು ಯೋಜನೆ ಹಾಗೂ ಇತರೆ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲಿದ್ದೇವೆ. ಮತ್ತು ಹೆಸ್ಕಾಂನ ಹೊಸ ಕಾಮಗಾರಿಗಳ ಭೂಮಿ ಪೂಜ ಸಂಸ್ಥಾಪನೆ ಉದ್ಘಾಟನೆ ಕಾರ್ಯಕ್ರಮ ಅವರು ನೆರವೇರಿಸಲಿದ್ದಾರೆ. ಫೆಬ್ರುವರಿ ಕೊನೆಯಲ್ಲಿ ತಾಲೂಕಿಗೆ ಮುಖ್ಯ ಮಂತ್ರಿಗಳನ್ನು ಕರೆದು ವಿವಿಧ ಯೋಜನೆಯ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ ಮಾಡುವ ಕುರಿತು ಯೋಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಸಂತೋಷ ಕೆ.ಭಂಡಾರಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ ವಿ.ರಾವ್, ಪಿ.ಐ ಕುಮಾರ ಕೆ. ಇದ್ದರು.