ಕಾರವಾರ: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಗೆ ಸರ್ಕಾರ ಬದ್ದವಾಗಿದ್ದು ನೂರು ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನಗರದ ಪೊಲೀಸ್ ಪೆರೇಟ್ ಮೈದಾನದಲ್ಲಿ ಧ್ವಜಾರೋಹಣದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಯಿಂದಲೇ ಸಾಕಷ್ಟು ಉದ್ಯೋಗ ಸೃಷ್ಟಿ ಮಾಡಬಹುದು. ಜೊತೆಗೆ ಪ್ರವಾಸಿಗರನ್ನ ಆಕರ್ಷಣೆ ಮಾಡಿ ಅಭಿವೃದ್ದಿಗೂ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ನೂರು ಕೋಟಿ ವೆಚ್ಚದಲ್ಲಿ ಕಡಲ ಕಿನಾರೆ ಮತ್ತು ಇತರೇ ಪ್ರವಾಸಿ ತಾಣಗಳ ಅಭಿವೃದ್ದಿ ಮಾಡಲಾಗುವುದು ಎಂದರು.
ಸಿ.ಆರ್.ಜೆಡ್ ಸಮಸ್ಯೆಯಿಂದ ಮರಳುಗಾರಿಕೆ ಜಿಲ್ಲೆಯಲ್ಲಿ ನಿಷೇದ ಇರುವ ಹಿನ್ನಲೆಯಲ್ಲಿ ಜನರಿಗೆ ಸಮಸ್ಯೆ ಆಗಿದೆ. ಈ ನಿಟ್ಟಿನಲ್ಲಿ ಜನರಿಗೆ ಮರಳನ್ನ ಒದಗಿಸಲು ಪ್ರಯತ್ನ ಮಾಡಲಾಗುತ್ತಿದೆ. ಸಿ.ಆರ್.ಜೆಡ್ ವಲಯವಲ್ಲದ ಪ್ರದೇಶದಲ್ಲಿ ಮರಳು ತೆಗೆಯಲು ಸ್ಥಳಗಳನ್ನ ಗುರುತು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಡ್ಯಾಂಗಳಲ್ಲಿ ಮರಳು ಶೇಖರಣೆಯಾಗಿದ್ದು ಅದನ್ನ ತೆಗೆದು ಜನರಿಗೆ ಒದಗಿಸುವ ಬಗ್ಗೆ ಚಿಂತನೆ ಮಾಡಲಾಗಿದೆ. ಡ್ಯಾಂ ಸುರಕ್ಷತೆ ಹಾಗೂ ಮರಳು ತೆಗೆಯುವ ಸಾದ್ಯತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಲು ತಿಳಿಸಲಾಗಿದೆ. ಶೀಘ್ರದಲ್ಲೇ ಜನರಿಗೆ ಸಮಸ್ಯೆ ಆಗಿರುವ ಮರಳನ್ನ ಓಳನಾಡು ಪ್ರದೇಶದಿಂದ ಸಿಆರ್.ಜೆಡ್ ತೀರ್ಪು ಬರುವ ವರೆಗೆ ಒದಗಿಸುವ ಕಾರ್ಯವನ್ನ ಮಾಡಲಾಗುವುದು ಎಂದಿದ್ದಾರೆ.
ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಹಾಲಕ್ಕಿ, ಕುಣಬಿ ಹಾಗೂ ಗೌಳಿ ಸಮುದಾಯದವರು ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರಸ್ತಾವನೆಯನ್ನ ಸರ್ಕಾರಕ್ಕೆ ಕಳಿಸಲಾಗಿದೆ. ಸಮುದಾಯದ ಕುಲಶಾಸ್ತ್ರ ಅಧ್ಯಯನ ಅಗತ್ಯ ಇರುವುದರಿಂದ ಅದನ್ನ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಜಾಗವನ್ನ ನೋಡಿದ್ದೇವೆ. ಅಲ್ಲದೇ ಇನ್ನೊಂದು ಜಾಗವನ್ನ ಸಹ ನೋಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ಸಹ ತಂದಿದ್ದು ಜಿಲ್ಲೆಗೆ ಆಗಮಿಸಿ ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸುವ ವಿಶ್ವಾಸವಿದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.