ಕಾರವಾರ: ಗಣರಾಜ್ಯವು ಕೇವಲ ರಾಜಕೀಯ ಘಟಕವಲ್ಲ, ಜೀವಂತ ಉಸಿರಾಟದ ಕಲ್ಪನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದ ಅವರು, ರಾಷ್ಟ್ರೀಯ ಏಕತೆ ಮತ್ತು ಸಾಮರಸ್ಯದ ಮಹತ್ವವನ್ನು ನೆನಪಿಸುತ್ತವೆ. ಇತರರ ನಂಬಿಕೆ ಮತ್ತು ಆಚರಣೆಗಳನ್ನು ಗೌರವಿಸುವುದು ಹಾಗೂ ಪ್ರತಿಯೊಬ್ಬರನ್ನು ಘನತೆ ಮತ್ತು ಗೌರವದಿಂದ ಕಾಣುವ ಸಮಾಜಕ್ಕಾಗಿ ಶ್ರಮಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮದೇ ದೇಶ-ನಮ್ಮದೇ ಸಂವಿಧಾನ- ನಮ್ಮದೇ ಆಡಳಿತ-ನಾವು ಸ್ವತಂತ್ರರಾಗಿ ಬದುಕುತ್ತೇವೆ ಎನ್ನುವ ಶಪಥವನ್ನು ಸಮಸ್ತ ಭಾರತೀಯರೂ ಕೈಗೊಂಡ ದಿನ ನಮ್ಮ ಗಣರಾಜ್ಯ ದಿನವಾಗಿ ರೂಪಗೊಳ್ಳುತ್ತದೆ ಎಂದರು.
ವಿವಿಧತೆಯಲ್ಲಿ ಏಕತೆಯನ್ನು ಸಾರುವ ಏಕೈಕ ರಾಷ್ಟ್ರ ನಮ್ಮ ಭಾರತ. ಐಕ್ಯತೆ, ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ಸದೃಢ ರಾಷ್ಟ್ರವಾಗಿ ಭಾರತ ಬೆಳೆದು ನಿಂತಿದೆ. ಭವ್ಯ ಭಾರತವನ್ನು ಅಖಂಡ ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂಬುದನ್ನು ನಾವು ಹೆಮ್ಮೆಯಿಂದ ಹೇಳಬಹುದು. ಸಂವಿಧಾನದ ಆಶಯದ ಭದ್ರ ಬುನಾದಿಯ ಮೇಲೆ ನಾಡ ಕಟ್ಟುವ ಕೆಲಸ ನಮ್ಮ ಸರ್ಕಾರ ಮುಂದುವರೆಸಿದೆ ಎಂದರು.
ಧ್ವಜಾರೋಹಣಕ್ಕೂ ಮುನ್ನ ಸಚಿವರು ಮಹಾತ್ಮಾ ಗಾಂಧೀಜಿ ಹಾಗೂ ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಿದರು. ನಂತರ ತೆರೆದ ಜೀಪಿನಲ್ಲಿ ಪರೇಡ್ ತಂಡಗಳ ಪರಿವೀಕ್ಷಣೆ ನಡೆಸಿದರು. ಪೊಲೀಸ್, ಮಹಿಳಾ ಪೊಲೀಸ್, ಗೃಹರಕ್ಷಕದಳ, ಅರಣ್ಯ ಇಲಾಖೆ, ಎನ್‌ಸಿಸಿ ಸೇರಿದಂತೆ 15 ತಂಡಗಳಿಂದ ಆಕರ್ಷಕ ಪಥಸಂಚಲನವನ್ನ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಎಸ್ಪಿ ವಿಷ್ಣುವರ್ಧನ್ ಸೇರಿದಂತೆ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ಸಾರ್ವಜನಿಕರು ಹಾಜರಿದ್ದರು.