ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸಮಾಜದವರ ಜ್ವಲಂತ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಪದ್ಮಶ್ರೀಗಳಾದ ಸುಕ್ರಿ ಗೌಡ ಹಾಗೂ ತುಳಸಿ ಗೌಡ ಅವರ ನೇತೃತ್ವದಲ್ಲಿ ಜ.25ರಂದು ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯೆದುರು ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಗುತ್ತದೆ ಎಂದು ಹಾಲಕ್ಕಿ ಒಕ್ಕಲಿಗ ಯುತ್ ಕ್ಲಬ್ ಅಧ್ಯಕ್ಷ ವಿನಾಯಕ ಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಕ್ಕಿ ಸಮಾಜದವರು ಸೀಬರ್ಡ್ ನೌಕಾನೆಲೆ ಯೋಜನೆಯಿಂದಾಗಿ ನಿರಾಶ್ರಿತರಾಗಿದ್ದಾರೆ. ಕದ್ರಾ ಯೋಜನೆಗೆ ಹಾಗೂ ಅಲ್ಲಿಂದ ಉಂಟಾಗುವ ಪ್ರವಾಹಕ್ಕೆ ನಿರಾಶ್ರಿತರಾಗುತ್ತಿದ್ದಾರೆ. ಈಗ ಹೊನ್ನಾಳಿ ಕಿಂಡಿ ಅಣೆಕಟ್ಟು, ಅಲಗೇರಿಯಲ್ಲಿ ವಿಮಾನ ನಿಲ್ದಾಣ, ಕುಮಟಾ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಗೆ ನಿರಾಶ್ರಿತರಾಗುತ್ತಿದ್ದಾರೆ. ಇದರ ಜೊತೆಗೆ ನಮ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ದಶಕಗಳ ಕೂಗು ಇದ್ದು, ಹೀಗೆ ಹಲವಾರು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಸಮಾನ ಮನಸ್ಕರು ಸೇರಿ ಪ್ರತಿಭಟನೆ ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಧರಣಿಗೆ ನಮ್ಮ ಸಮಾಜದವರ ಜಿತೆಗೆ ಅನ್ಯ ಸಮಾಜದವರನ್ನೂ ಆಹ್ವಾನಿಸಿದ್ದೇವೆ ಎಂದರು.
ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಮೋಹನದಾಸ್ ಗೌಡ ಮಾತನಾಡಿ, ಹಾಲಕ್ಕಿ ಒಕ್ಕಲಿಗರು ಇಡೀ ಜಿಲ್ಲೆಯಲ್ಲಿ ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ ತಾಲೂಕಿನಲ್ಲಿ ಮಾತ್ರ ಇದ್ದಾರೆ. ನಾವು ಸೀಬರ್ಡ್ ಯೋಜನೆಗೆ ಜಾಗ ಬಿಟ್ಟುಕೊಟ್ಟೆವು. 2007ರಿಂದ ಕೊಂಕಣ ರೈಲ್ವೆಗೆ ನಿರಾಶ್ರಿತರಾದೆವು. ಕೊಂಕಣ ರೈಲ್ವೆ ನಷ್ಟದಲ್ಲೇನಿಲ್ಲ. ನಾನೂ ಈ ರೈಲ್ವೆ ಯೋಜನೆಯ ನಿರಾಶ್ರಿತ, ನನ್ನ ಎಂಟು ಎಕರೆ ಕೃಷಿ ಜಮೀನು ಇದಕ್ಕಾಗಿ ಹೋಗಿದೆ. 29 ವರ್ಷಗಳಾದರೂ ಈವರೆಗೆ ನನಗೆ ಪರಿಹಾರ ಬಂದಿಲ್ಲ. ಕೇಳಿದರೆ ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ್ದೀರಿ ಎನ್ನುತ್ತಾರೆ. ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಂಡು ಸರ್ಕಾರ ಪರಿಹಾರ, ಪುನವರ್ಸತಿ ಕಲ್ಪಿಸಬೇಕು ಎಂದರು.
ಯುತ್ ಕ್ಲಬ್ ಕಾರ್ಯದರ್ಶಿ ಮಾರುತಿ ಗೌಡ ಮಾತನಾಡಿ, ಕರಾವಳಿ ಭಾಗದ ಇತಿಹಾಸ ನೋಡಿದರೆ ಹೆಚ್ಚು ಶೋಷಣೆ, ಹಾನಿಗೊಳಗಾಗಿದ್ದು ಹಾಲಕ್ಕಿ ಸಮಾಜ 30 ವರ್ಷಗಳಿಂದ ಹೋರಾಟಗಳನ್ನ ನಡೆಸುತ್ತಿದ್ದರೂ ಈವರೆಗೆ ಸಮುದಾಯವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಾರ್ಯವಾಗಿಲ್ಲ. ಹೀಗಾಗಿ ನಮಗೆ ಪ್ರತ್ಯೇಕ ಪ್ರಾಧಿಕಾರ ರಚನೆಯಾಗಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಂಕೇತಿಕ ಧರಣಿ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಲಾಗುತ್ತದೆ. ಹಾಲಕ್ಕಿ ಸಮಾಜದವರು ಈ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಿಂಡಿ ಆಣೆಕಟ್ಟು ಯೋಜನೆಯ ಹೋರಾಟ ಸಮಿತಿ ಅಧ್ಯಕ್ಷ ಆನಂದು ಗೌಡ, ಪ್ರಮುಖರಾದ ಡಿಂಗಾ ಗೌಡ ಬಿಣಗಾ, ಅರುಣ್ ಗೌಡ ಕಡಿಮೆ, ಮೋಹನದಾಸ್ ಗೌಡ, ಗಣೇಶ್ ಗೌಡ, ರಮಾಕಾಂತ ಗೌಡ, ರಾಜೇಶ್ ಗೌಡ, ಹರೀಶ್ ಗೌಡ ಬೆಳಂಬರ, ಯಶ್ವಂತ ಗೌಡ ಹೊನ್ನಳ್ಳಿ ಇದ್ದರು.