ಕಾರವಾರ: ಈ ನಗರ ರವೀಂದ್ರನಾಥ ಟ್ಯಾಗೋರ್ ಅವರಿಗೆ ಸ್ಫೂರ್ತಿ ನೀಡಿದ ತಾಣ ಎಂಬುದು ಹೆಮ್ಮೆಯ ಸಂಗತಿ. ಇಂತಹ ನಿಸರ್ಗದಲ್ಲಿ ನಾವೆಲ್ಲ ಟ್ರಸ್ಟಿಗಳಿದ್ದಂತೆ. ಇದನ್ನು ಉಳಿಸಿ, ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ನೀಡುವುದು ನಮ್ಮ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು.
ನಗರದ ಹಿಂದೂ ಹೈಸ್ಕೂಲ್ನ 125ನೇ ವರ್ಷಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಡೆಗಳಿಸಿ ಮಾತನಾಡಿದ ಅವರು, 1897ರಿಂದ ಹಿಂದೂ ಪ್ರೌಢಶಾಲೆಯು ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿದೆ ಎಂದರೆ ಅದಕ್ಕೆ ಕಾರವಾರ ಎಜುಕೇಷನ್ ಸೊಸೈಟಿಯ ನಿಷ್ಠೆಯೇ ಕಾರಣ. ಶುರುವಿನಿಂದಲೂ ಜಾತಿ, ಧರ್ಮ, ಭಾಷೆ ಹಾಗೂ ರಾಜಕೀಯವನ್ನು ದೂರವಿಟ್ಟು ಸಮಾನ ಶಿಕ್ಷಣ ನೀಡುತ್ತಿದೆ. ಇಂತಹ ಸಂಸ್ಥೆಗಳು ದೇಶದಲ್ಲಿ ತುಂಬಾ ವಿರಳ ಎಂದರು.
ಈ ಶಾಲೆಯಲ್ಲಿ ಕಲಿತ ಮಕ್ಕಳು ಇಂದು ದೇಶದ ವಿವಿಧ ಜವಾಬ್ದಾರಿಯುತ ಹುದ್ದೆಯಲ್ಲಿದ್ದಾರೆ. ಕಲಿಕೆಯ ಹಂತದಲ್ಲಿ ಮಕ್ಕಳು ಸಂವಿಧಾನದ ಹಕ್ಕುಗಳನ್ನು ಅರಿತು, ಪ್ರೆಶ್ನೆ ಮಾಡುವುದನ್ನು ಕಲಿಯಬೇಕು. ಆಗಲೇ ಸಮಾಜದ ಓರೆಕೋರೆಗಳನ್ನು ತಿದ್ದಲು ಸಾಧ್ಯ ಎಂದರು.
ಮುಂಬೈನ ಆಸ್ತೆಸಿಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ ಡಾ.ಉರ್ವಿ ಜಂಗಮ್ ಮಾತನಾಡಿ, ಅಂಗವಿಕಲತೆ ಎನ್ನುವುದು ದೇಹಕ್ಕೆ ಮಾತ್ರವೆ ಹೊರತು ಆತ್ಮಕ್ಕಿಲ್ಲ. ಹೀಗಾಗಿ ಸಾಧನೆ ಮಾಡುವವರಿಗೆ ದೇಹಬಲಕ್ಕಿಂತ ಆತ್ಮಸ್ಥೈರ್ಯ ಇರಬೇಕು. ಜರ್ಮನಿಯಲ್ಲಿ ನಾನು ಪದವಿ ಕಲಿಯಲು ಹೋದಾಗ ಕಣ್ಣು ಕಾಣದ ನೀನು ಕಲಿಯಲಾರೆ ಎಂದು ಗೇಲಿ ಮಾಡಿದ್ದರು. ಆದರೆ ಕೇವಲ ಭಾಷೆಯನ್ನು ಕೇಳುವ ಹಾಗೂ ಅನುಭವಿಸುವುದರಿಂದಲೇ ಜರ್ಮನ್ ಭಾಷೆಯನ್ನು ಕಲಿತು ಅದರಲ್ಲಿಯೇ ಪಿಎಚ್ಡಿ ಪಡೆದೆ ಎಂದರು.
ಕಾರವಾರ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಎಸ್.ಪಿ.ಕಾಮತ್ ಪ್ರಾಸ್ತವಿಕವಾಗಿ ಮಾತನಾಡಿದರು. ಶಾಸಕಿ ರೂಪಾಲಿ ನಾಯ್ಕ, ದಿವೇಕರ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಆರ್.ಎಸ್.ಹಬ್ಬು, ಕಾರವಾರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಅನಿರುದ್ ಹಳದಿಪುರ, ಹೈಕೋರ್ಟ್ ವಕೀಲ ದೇವದತ್ತ ಕಾಮತ್, ಬಾಲಮಂದಿರ ಶಾಲೆಯ ಮುಖ್ಯ ಶಿಕ್ಷಕಿ ಅಂಜಲಿ ಮಾನೆ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.