ಭಟ್ಕಳ: ತಾಲ್ಲೂಕಿನ ಬೈಲೂರಿನ ಮಡಿಕೇರಿಯಲ್ಲಿರುವ ಗೋಪಾಲಕೃಷ್ಣ ಗೋಶಾಲೆಯು ಅನುದಾನ ಕೊರತೆಯಿಂದ ಗೋವುಗಳ ಪಾಲನೆಗೆ ಕಷ್ಟಪಡುತ್ತಿದೆ. ಮೇವು ಖರೀದಿಗೂ ಹಣ ಇಲ್ಲದೆ ಅನ್ನಾಹಾರದ ಕೊರತೆಯಿಂದಾಗಿ ಹಸುಗಳು ಸೊರಗುತ್ತಿವೆ.
ರಸ್ತೆಯಲ್ಲಿ ತಿರುಗುವ ಬಿಡಾಡಿ ದನಗಳನ್ನು ಹಾಗೂ ಕಸಾಯಿಖಾನೆಗೆ ಸಾಗಿಸುವಾಗ ಸಿಕ್ಕಿಬಿದ್ದ ದನಗಳನ್ನು ಪೊಲೀಸರು ಈ ಗೋಶಾಲೆಗೆ ತಂದು ಬಿಡುತ್ತಾರೆ. ಅಂತಹ ದನಗಳನ್ನು ಈ ಗೋಶಾಲೆಯಲ್ಲಿ ಪೋಷಿಸಲಾಗುತ್ತಿದೆ. 2016ರಲ್ಲಿ ಗೋಪಾಲಕೃಷ್ಣ ಗೋಶಾಲಾ ಟ್ರಸ್ಟ್ ಆರಂಭಿಸಿದ್ದ ಈ ಗೋಶಾಲೆಯು ದಾನಿಗಳ ಸಹಕಾರದೊಂದಿಗೆ ನಿರ್ವಹಣೆ ಆಗುತ್ತಿದೆ. ಈಚೆಗೆ ಗೋ ಪೋಷಣೆಗೆ ಅಗತ್ಯವಾದ ಹಿಂಡಿ, ಹುಲ್ಲು ಸೇರಿದಂತೆ ಮೇವು ಪದಾರ್ಥಗಳನ್ನು ಖರೀದಿಸಲು ಅನುದಾನ ಕೊರತೆ ಉಂಟಾಗುತ್ತಿದೆ. ಗೋಶಾಲೆಯಲ್ಲಿರುವ 65ಕ್ಕೂ ಹೆಚ್ಚು ಗೋವುಗಳು ಮೇವು, ಹಿಂಡಿ ಸರಿಯಾಗಿ ಸಿಗದೇ ಹಸಿವಿನಿಂದ ಬಳಲುವಂತಾಗಿದೆ ಎಂದು ಗೋಶಾಲೆ ನಿರ್ವಹಿಸುತ್ತಿರುವ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಹಸುಗಳಿಂದ ಹಾಲಿನ ಇಳುವರಿ ಕಡಿಮೆ ಇದೆ. ಈ ಹಸುಗಳ ಹಾಲಿನಿಂದ ಪ್ರತಿದಿನ 750 ಆದಾಯ ಇದ್ದರೆ, ಮೇವು ಹಿಂಡಿ ಸೇರಿದಂತೆ ಅಂದಾಜು ಮೂರು ಸಾವಿರಕ್ಕೂ ಹೆಚ್ಚು ಖರ್ಚು ಬರುತ್ತದೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ಗೋವು ಪಾಲನೆಗಾಗಿ 1 ಲಕ್ಷ ಅನುದಾನ ನೀಡಿತ್ತು. ಧರ್ಮಸ್ಥಳದ ವಿರೇಂದ್ರ ಹೆಗ್ಗಡೆಯವರು ನಮ್ಮ ಗೋಶಾಲೆಯ ಬಗ್ಗೆ ಸಮೀಕ್ಷೆ ನಡೆಸಿ ಅಂದಾಜು 75 ಸಾವಿರ ಅನುದಾನ ಬಿಡುಗಡೆ ಮಾಡಿದ್ದರು. ಅದರ ಹೊರತಾಗಿ ಬೇರೆ ನೆರವು ಸರ್ಕಾರದಿಂದ ಬಂದಿಲ್ಲ ಎನ್ನುತ್ತಾರೆ. ಪುಣ್ಯಕೋಟಿ ನಿಧಿಯಡಿ ಸರ್ಕಾರ ನಮ್ಮ ಗೋಶಾಲೆಯನ್ನು ಪರಿಗಣಿಸಿ ತಕ್ಷಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಗೋಪಾಲಕೃಷ್ಣ ಗೋಶಾಲಾ ಟ್ರಸ್ಟ್ನ ಅಧ್ಯಕ್ಷ ವಿಷ್ಣು ನಾಯ್ಕ ಮನವಿ ಮಾಡಿಕೊಂಡಿದ್ದಾರೆ.
ಸಹಾಯಕ್ಕಾಗಿ:
ಶ್ರೀ ಗೋಪಾಲಕೃಷ್ಣ ಗೋಶಾಲಾ ಟ್ರಸ್ಟ್ ಮಡಿಕೇರಿ, ಬೈಲೂರು, ತಾ|| ಭಟ್ಕಳ- 581 350
ಶ್ರೀ ಗೋಪಾಲಕೃಷ್ಣ ಗೋಶಾಲಾ ಟ್ರಸ್ಟ್,
ಕೆನರಾ ಬ್ಯಾಂಕ್, ಮುರ್ಡೇಶ್ವರ ಶಾಖೆ
ಖಾತೆ ಸಂಖ್ಯೆ: 03102200204454
IFSC: CNRB0010310