ಅಂಕೋಲಾ: ಲೋಕೋಪಯೋಗಿ ಇಲಾಖೆಯಿಂದ ಕಳೆದ ಎರಡು ತಿಂಗಳ ಹಿಂದೆ ನಾಲ್ಕು ಕಡೆಯ ರಸ್ತೆ ಕಾಮಗಾರಿಗೆ ಟೆಂಡರ್ ನಡೆದಿತ್ತು. ಆದರೆ 3 ಕಾಮಗಾರಿಗಳು ಪೂರ್ಣಗೊಂಡಿದೆ. ಆದರೆ ಮಂಜಗುಣಿಯ ರಸ್ತೆಗೆ ಟೆಂಡರ್ ಪಡೆದ ಗುತ್ತಿಗೆದಾರ ಇನ್ನುವರೆಗೂ ಕಾಮಗಾರಿ ಆರಂಭಿಸದಿದ್ದರಿoದಾಗಿ ಟೆಂಡರ್ ರದ್ದುಪಡಿಸುವ ಎಚ್ಚರಿಕೆ ನೀಡಿದ್ದಾರೆ.
ಕಳೆದ ಅಕ್ಟೋಬರ್ನಲ್ಲಿ ರಸ್ತೆ ಕಾಮಗಾರಿಗಾಗಿ ನಡೆದ 4 ಟೆಂಡರ್ನಲ್ಲಿ 50 ಲಕ್ಷ ವೆಚ್ಚದ ಮಂಜಗುಣಿ ರಸ್ತೆ ಕಾಮಗಾರಿ ಎಸ್.ಸಿ. ಗುತ್ತಿಗೆದಾರರಿಗೆ ಮೀಸಲಾಗಿದ್ದು, ಅದನ್ನು ಹಾನಗಲ್ಲಿನ ಲಕ್ಷ್ಮಣ ತಳವಾರ ಎನ್ನುವವರು ಗುತ್ತಿಗೆ ಪಡೆದುಕೊಂಡಿದ್ದರು. ಆದರೆ ಮೂರು ತಿಂಗಳಾದರೂ ಕಾಮಗಾರಿ ಆರಂಭಗೊಳಿಸದ ಹಿನ್ನೆಲೆಯಲ್ಲಿ ಟೆಂಡರ್ ರದ್ದುಪಡಿಸುವ ಎಚ್ಚರಿಕೆ ಅಧಿಕಾರಿಗಳು ನೀಡಿದ್ದಾರೆ.
ಈ ಕುರಿತು ಹೊನ್ನೆಬೈಲ್ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟರಮಣ ಕೆ.ನಾಯ್ಕ ಮಂಜಗುಣಿ, ಪ್ರಮುಖರಾದ ಶ್ರೀಪಾದ ಟಿ.ನಾಯ್ಕ, ನಾಗರಾಜ ಮಂಜಗುಣಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಶಿಕಾಂತ ಕೋಳೆಕರ ಅವರನ್ನು ಮಂಗಳವಾರ ಭೇಟಿಯಾಗಿ ವಿಷಯ ಚರ್ಚಿಸಿ ತಕ್ಷಣ ಕಾಮಗಾರಿ ಆರಂಭವಾಗದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದರು.