ಕುಮಟಾ: ತಾಲೂಕಿನ ಮಾಸೂರಿನ ಶ್ರೀಬಬ್ರುಲಿಂಗೇಶ್ವರ ದೇವಸ್ಥಾನದಲ್ಲಿ ಕಳಸ ಉತ್ಸವ ವಿವಿಧ ದೈವಿ ಕೈಂಕರ್ಯಗಳ ಮುಖೇನ ಸಂಪನ್ನಗೊoಡಿತು.
ತಾಲೂಕಿನ ಹೆಗಡೆ ಗ್ರಾಪಂ ವ್ಯಾಪ್ತಿಯ ಮಾಸೂರಿನಲ್ಲಿ ಮಕರ ಸಂಕ್ರಾoತಿ ನಿಮಿತ್ತ ಶ್ರೀ ಬಬ್ರುಲಿಂಗೇಶ್ವರ ದೇವಸ್ಥಾನದಲ್ಲಿ ಕಳಸ ಉತ್ಸವ ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು. ನಿನ್ನೆ ಕಳಸ ಉತ್ಸವ ಆರಂಭವಾಗಿದ್ದು, ಮಾಸೂರಿನ ಕಲಶ ದೇವಸ್ಥಾನ ಮತ್ತು ಕೋಮಾರ ಗೋಳಿ ಜೈನ ಜಟಕ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಲಾಯಿತು.
ಶ್ರೀ ಬಬ್ರುದೇವರ ಮತ್ತು ಬಾಗಿಲ ಬೀರ, ಸೂಲದ ಬೀರರ ಕಳಸಗಳು ಲುಕ್ಕೇರಿ ದೇವರಬೋಳೆಯ ಶ್ರೀ ಶಂಭುಲಿoಗೇಶ್ವರ ದೇವಸ್ಥಾನಕ್ಕೆ ತೆರಳಿ, ಅಲ್ಲಿ ತುಲಾಭಾರ ಸೇವೆಯ ನಂತರ ಭಕ್ತರಿಂದ ಆರತಿ ಸೇವೆ ಸ್ವೀಕರಿಸಿತು. ಬಳಿಕ ಅಲ್ಲಿಂದ ಮರಳಿದ ದೇವರ ಕಳಸಗಳಿಗೆ ಮಾಸೂರಿನ ಕಳಶ ದೇವಾಲಯದಲ್ಲಿ ಹೆಣ್ಣು ಮಕ್ಕಳ ಆರತಿ ಬೆಳಗುವ ಮೂಲಕ ಪೂಜಾ ಸೇವೆ ಸಲ್ಲಿಸಿದರು.
ದೇವರ ಕಳಸವು ಅಘನಾಶಿನಿ ನದಿಯಲ್ಲಿ ದೋಣಿ ವಿಹಾರ ನಡೆಸುವ ಮೂಲಕ ಬಬ್ರುದೇವರ ಮಂದಿರಕ್ಕೆ ತೆರಳಿತು. ಶ್ರೀ ಬಬ್ರುಲಿಂಗೇಶ್ವರನ ಸನ್ನಿಧಿಯಲ್ಲಿ ತುಲಾಭಾರ ಸೇವೆ, ಮಹಾ ಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿತರಿಸುವ ಮೂಲಕ ಕಳಸ ಉತ್ಸವ ಸಂಪನ್ನಗೊoಡಿತು. ಉತ್ಸವದ ಎರಡು ದಿನಗಳು ಸಾವಿರಾರು ಭಕ್ತರು ಪಾಲ್ಗೊಂಡು ದೇವಿಗೆ ವಿವಿಧ ಪೂಜಾ ಸೇವೆಯನ್ನು ಸಮರ್ಪಿಸುವ ಮೂಲಕ ಉತ್ಸವವನ್ನು ಯಶಸ್ವಿಗೊಳಿಸಿದರು.