Slide
Slide
Slide
previous arrow
next arrow

ಕರಾವಳಿ- ಮಲೆನಾಡಿನ ಪರಿಸರ ಅವಘಡಗಳ ಬಗ್ಗೆ ಡಿಸಿಯೊಂದಿಗೆ ಚರ್ಚೆ

300x250 AD

ಕಾರವಾರ: ಜೀವವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಮಂಡಳಿ ಸದಸ್ಯ ಡಾ.ಪ್ರಕಾಶ ಮೇಸ್ತ, ಕರಾವಳಿ ಪರಿಸರ ಕಾಯಿದೆ ತಜ್ಞ ಡಾ.ಮಹಾಬಲೇಶ್ವರ ಹೆಗಡೆ ಮುಂತಾದವರಿದ್ದ ತಜ್ಞರ ತಂಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಕರಾವಳಿ ಮಲೆನಾಡಿನ ಪರಿಸರ ಅವಘಡಗಳ ಬಗ್ಗೆ ಸರ್ಕಾರದ ಗಮನ ಸೆಳೆಯಿತು.
2020-21ರಲ್ಲಿ ಜೀವವೈವಿಧ್ಯ ಮಂಡಳಿ ಕಾರವಾರದಿಂದ ಅಂಕೋಲಾದವರೆಗೆ (ಗ್ರೀನ್ ಬೆಲ್ಟ್) ಹಸಿರು ಪಟ್ಟಿ ನಿರ್ಮಾಣ ಯೋಜನೆ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆ ಹಾಗೂ ನೌಕಾನೆಲೆಗಳ ಮುಂದೆ ಮಂಡಿಸಿತ್ತು. ನಂತರ ರಾಜ್ಯ ಮುಖ್ಯ ಕಾರ್ಯದರ್ಶಿಗಳ ಮುಂದೆ ಈ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಗ್ರೀನ್‌ಬೆಲ್ಟ ಯೋಜನೆಗೆ ನೌಕಾನೆಲೆಯವರು ಅನುದಾನ ನೀಡಲು ಒಪ್ಪಿಗೆ ನೀಡಲಿದ್ದಾರೆ. ಇದೊಂದು ರಾಜ್ಯದಲ್ಲೇ ಮಾದರಿ ವನೀಕರಣ ಯೋಜನೆ ಆಗಲಿದೆ. 2023ರ ಫೆಬ್ರವರಿ– ಮಾರ್ಚ್ನಲ್ಲಿ ಗ್ರೀನ್‌ಬೆಲ್ಟ್ ಯೋಜನೆ ಆರಂಭಿಸಲು ತಾವು ವಿಶೇಷ ಪ್ರಯತ್ನ ನಡೆಸಬೇಕೆಂದು ತಜ್ಞರ ತಂಡ ಮನವಿ ಮಾಡಿತು.
ಕರಾವಳಿ ಹಸಿರು ಕವಚ ಯೋಜನೆಯನ್ನು 2011/12/13ರಲ್ಲಿ ಪಶ್ಚಿಮಘಟ್ಟ ಕಾರ್ಯಪಡೆ ಅರಣ್ಯ ಇಲಾಖೆ ಜಾರಿ ಮಾಡಿತ್ತು. ಸಮುದ್ರ ತೀರದಲ್ಲಿ ವನೀಕರಣ, ಹಸಿರುಗೋಡೆ ಬೆಳೆಸುವ ಯೋಜನೆ ಪ್ರಯೋಗದಿಂದ ಸಮುದ್ರ ಕೊರೆತ ತಡೆ ಸಾಧ್ಯವಾಗುತ್ತದೆ. ಚಂಡಮಾರುತದಿoದ ಸಮುದ್ರತೀರ ನಾಶವಾಗುವುದನ್ನು ತಪ್ಪಿಸಲು ಸಾಧ್ಯ. ಈ ಕಾರಣದಿಂದ ಕರಾವಳಿ ಹಸಿರು ಕವಚ ಯೋಜನೆಯನ್ನು ಪುನಃ ಜಾರಿ ಮಾಡಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು ತಂಡ ಒತ್ತಾಯ ಮಾಡಿತು. ಭೂ ಕುಸಿತದಿಂದ ಉ.ಕ. ಜಿಲ್ಲೆ ತತ್ತರಿಸಿದೆ. ಕಳಚೆ ಭೂಕುಸಿತ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು ಸರ್ಕಾರ ಮುಂದಾಗಬೇಕು.ಭಟ್ಕಳ ಮುಟ್ಠಳ್ಳಿ ಭೂಕುಸಿತ ಪೀಡಿತ ರೈತರಿಗೆ ಪುನರ್ ವಸತಿ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲು ಕೋರಿತು.
ಮಲೆನಾಡು – ಕರಾವಳಿ ಸುಸ್ಥಿರ ಅಭಿವೃದ್ಧಿ ಪ್ಯಾಕೇಜ್‌ನ್ನು ಬಜೆಟ್‌ನಲ್ಲಿ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಲು ತಂಡ ವಿವರ ಪ್ರಸ್ತಾವನೆ ಸಲ್ಲಿಸಿತು. ರಾಮತೀರ್ಥ ( ಹೊನ್ನಾವರ) ಪಾರಂಪರಿಕ ಸ್ಥಳ, ಜಲಮೂಲ ನಾಶವಾಗುತ್ತಿದೆ. ತ್ಯಾಜ್ಯದಿಂದ ತುಂಬಿದೆ. ನಿರ್ವಹಣೆ ಇಲ್ಲ, ಅದಕ್ಕಾಗಿ ರಾಮತೀರ್ಥ ನಿರ್ವಹಣಾ ಸಮೀತಿ ರಚಿಸಬೇಕು ಎಂದು ಹೊನ್ನಾವರ ಸಂಘ ಸಂಸ್ಥೆ, ಪುರಾತತ್ವ ಇಲಾಖೆ, ನಗರಸಭೆ, ತಾಲೂಕಾ ಆಡಳಿತ, ಅರಣ್ಯ ಇಲಾಖೆ ಸಭೆ ಸೇರಿ ನಿರ್ಣಯ ಮಾಡಿವೆ. ಜಿಲ್ಲಾಧಿಕಾರಿಗಳು ಸ್ಥಳ ಭೇಟಿ ಮಾಡಿ ಪಾರಂಪರಿಕ ತಾಣ ಪ್ರಸಿದ್ಧ ರಾಮತೀರ್ಥ ರಕ್ಷಣೆಗೆ ಮುಂದಾಗಲು ತಂಡ ಒತ್ತಾಯಿಸಿತು.
ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಘಟಕ ಬಲಪಡಿಸಲು ವಿಶೇಷ ಕಾರ್ಯ ಯೋಜನೆ ರೂಪಿಸಬೇಕು. ಈ ಯೋಜನೆಗೆ (ಭೂಕುಸಿತ ಮುನ್ಸೂಚನೆ ಮುಂತಾದ ಪೂರ್ವಭಾವೀ ಕಾರ್ಯಚಟುವಟಿಕೆಗಳು) ಅನುದಾನ ನೀಡಲು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದವರ ಸಹಾಯ ಪಡೆಯಬೇಕು ಎಂದು ತಜ್ಞರ ತಂಡ ಮನವಿ ಮಾಡಿತು. ಡಾ.ಮಹಾಬಲೇಶ್ವರ ಹೆಗಡೆ ಅವರು ಕರಾವಳಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಅವೈಜ್ಞಾನಿಕ ಕಾಮಗಾರಿಗಳಿಂದ ಜನಜೀವನ, ಜಲಮೂಲ, ಅರಣ್ಯಗಳ ಮೇಲೆ ಆಗುತ್ತಿರುವ ಅವಘಡಗಳ ಕುರಿತು ವಿಶೇಷ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಇದಕ್ಕೂ ಮೊದಲು ಮರೈನ್ ಬಯಾಲಜಿ ಸ್ನಾತಕೋತ್ತರ ಕೇಂದ್ರದಲ್ಲಿ ಕರಾವಳಿ ಪರಿಸರ ಪರಿಸ್ಥಿತಿ ಕುರಿತು ವಿಜ್ಞಾನಿಗಳು, ಸಂಶೋಧಕರು, ವಿದ್ಯಾರ್ಥಿಗಳ ಜೊತೆ ವೃಕ್ಷಲಕ್ಷ ತಜ್ಞರ ತಂಡ ಸಂವಾದ ನಡೆಸಿತು. ಈ ತಜ್ಞ ಸಮಾಲೋಚನೆಯಲ್ಲಿ ಡಾ.ಜಿ.ಎಲ್.ರಾಠೋಡ್, ಸಿ.ಆರ್.ಜೆಡ್, ಡಿಸಿಎಫ್, ಜಿಲ್ಲಾ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಹಾಗೂ ಸಿಎಂಎಫ್‌ಟಿಆರ್‌ಐ ವಿಜ್ಞಾನಿಗಳು ಮುಂತಾದ ತಜ್ಞರು ಅಧಿಕಾರಿಗಳು ಭಾಗಿ ಆಗಿದ್ದರು. ಜೀವವೈವಿಧ್ಯ ಮಂಡಳಿ ಸದಸ್ಯ ಡಾ.ಮೇಸ್ತ ಅವರು ರಾಜ್ಯ ಜೀವ ವೈವಿಧ್ಯ ಮಂಡಳಿ ರಾಮತೀರ್ಥಕ್ಕೆ ರಾಜ್ಯ ಪಾರಂಪರಿಕ ತಾಣ ಮಾನ್ಯತೆ ನೀಡಿದೆ ಎಂದು ತಿಳಿಸಿದರು.
2 ವರ್ಷ ಹಿಂದೆ ಅಂಕೋಲಾ ಕರಿ ಈಶಾಡು ಮಾವಿನ ಹಣ್ಣು ಅಪರೂಪದ ಹಣ್ಣಿನ ತಳಿ ಎಂದು ಜೀವವೈವಿಧ್ಯ ಮಂಡಳಿ ಗುರುತಿಸಿತ್ತು. ಅದಕ್ಕೆ ಕೇಂದ್ರ ಸರ್ಕಾರ ಜಿಯಾಗ್ರಫಿಕಲ್ ಇಂಡಿಕೇಟರ್ ಎಂಬ ಪಟ್ಟ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಜಿ.ಐ.ಮಾನ್ಯತೆ ಸದ್ಯದಲ್ಲೇ ಪ್ರಕಟವಾಗಲಿದೆ ಎಂಬ ಅಧಿಕೃತ ಮಾಹಿತಿ ಸಿಕ್ಕಿದೆ ಎಂದು ಅನಂತ ಅಶೀಸರ ತಿಳಿಸಿದರು. ಪರಿಸರ ತಜ್ಞರ ತಂಡ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಅವರನ್ನು ಭೇಟಿ ಮಾಡಿ ಜೀವವೈವಿಧ್ಯ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಿತು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನೂ ಪರಿಸರ ವಿಜ್ಞಾನಿಗಳ ತಂಡ ಭೇಟಿಮಾಡಿತು.

300x250 AD
Share This
300x250 AD
300x250 AD
300x250 AD
Back to top