ಜೊಯಿಡಾ: ತಾಲೂಕಿನ ಗುತ್ತಿಗೆದಾರರಿಗೆ ತಾಲೂಕಿನ ಗುತ್ತಿಗೆ ಕೆಲಸಗಳಲ್ಲಿ ಮೊದಲು ಆದ್ಯತೆ ನೀಡಬೇಕು. ಬೇರೆ ತಾಲೂಕಿನ, ಜಿಲ್ಲೆಯ ಗುತ್ತಿಗೆದಾರರು ನಮ್ಮ ತಾಲೂಕಿನಲ್ಲಿ ಗುತ್ತಿಗೆ ಕೆಲಸಕ್ಕೆ ಸ್ಪರ್ಧೆ ಮಾಡಬಾರದು. ಇಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮ ತಾಲೂಕಿನ ಜನರಿಗೆ ಸರ್ಕಾರಿ ಗುತ್ತಿಗೆ ಕೆಲಸ ಸಿಗಲು ಸಹಾಯ ಮಾಡಬೇಕು ಎಂದು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಗೇಶ ಕಾಮತ್ ಹೇಳಿದರು.
ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದ ಅವರು, ಜೊಯಿಡಾ ಹಿಂದುಳಿದ ತಾಲೂಕಾಗಿದೆ. ಇಲ್ಲಿ ಗುತ್ತಿಗೆದಾರರು ಕಡಿಮೆ ಇದ್ದಾರೆ. ಶಾಸಕ ಆರ್.ವಿ.ದೇಶಪಾಂಡೆ ಅವರು ನಮ್ಮ ತಾಲೂಕಿನ ಅಭಿವೃದ್ಧಿಯ ಸಲುವಾಗಿ ಕೋಟ್ಯಾಂತರ ಹಣವನ್ನು ಮಂಜೂರು ಮಾಡಿದ್ದಾರೆ. ಆದರೆ ನಮ್ಮ ತಾಲೂಕಿನಲ್ಲಿ ನಡೆಯುವ ಸರ್ಕಾರಿ ಕೆಲಸಗಳಿಗೆ ಹೊರ ತಾಲೂಕಿನ, ಜಿಲ್ಲೆಯ, ಗುತ್ತಿಗೆದಾರರು ಕೆಲಸ ಹಿಡಿಯುತ್ತಿದ್ದು, ಬಿಲೋ ಟೆಂಡರ್ ಹಾಕಿ ಕಳಪೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಬಾರದು, ನಮ್ಮ ತಾಲೂಕಿನ ಕೆಲಸ ನಮ್ಮ ಜನರಿಗೆ ಸಿಗಬೇಕು ಎಂದರು.
ದಯಮಾಡಿ ಬೇರೆ ತಾಲೂಕಿನ ಗುತ್ತಿಗೆದಾರರು ನಮ್ಮ ತಾಲೂಕಿನಲ್ಲಿ ಟೆಂಡರ್ ಹಾಕಬಾರದು. 75 ಲಕ್ಷಕ್ಕಿಂತ ಮೇಲ್ಪಟ್ಟ ಕೆಲಸಗಳಿಗೆ ಜಿಲ್ಲೆಯ ಗುತ್ತಿಗೆದಾರರು ಅರ್ಜಿ ಸಲ್ಲಿಸಿ ಗುತ್ತಿಗೆ ಪಡೆಯಲಿ. ನಮ್ಮ ತಾಲೂಕಿನ ಗುತ್ತಿಗೆದಾರರು ಕೂಡಾ ಬೇರೆ ತಾಲೂಕುಗಳಲ್ಲಿ ಗುತ್ತಿಗೆ ಪಡೆಯುವುದಿಲ್ಲ. ಈ ಬಗ್ಗೆ ಲೋಕೋಪಯೋಗಿ ಇಲಾಖೆ, ಜಿ.ಪಂ ಅಧಿಕಾರಿಗಳು ನಮಗೆ ಸಹಾಯ ಮಾಡಬೇಕು. ಶಾಸಕ ಆರ್.ವಿ.ದೇಶಪಾಂಡೆ ಅವರು ಕೂಡಾ ಈ ಸಮಸ್ಯೆಗೆ ನಮಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ರಾಜಾ ದೇಸಾಯಿ, ಸಂತೋಷ ಮಂಥೇರೋ, ಕಾರ್ಯದರ್ಶಿ ಅಂಥೋನಿ ಜಾನ್ ಸೇರಿದಂತೆ ಹಲವಾರು ಗುತ್ತಿಗೆದಾರರು ಪಾಲ್ಗೊಂಡಿದ್ದರು.