ಶಿರಸಿ: ಸಹಕಾರಿ ಸಂಘಕ್ಕೆ ತನ್ನ ಲಾಭದ ಚಿಂತೆಗಿಂತಲೂ ಗ್ರಾಹಕರ ಹಿತ ಮುಖ್ಯವಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ನುಡಿದರು.
ಅವರು ಯಡಹಳ್ಳಿಯಲ್ಲಿರುವ ಕಾನಗೋಡ ಗ್ರೂಪ್ ವಿವಿಧೋದ್ದೇಶ ಸಹಕಾರಿ ಸಂಘದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಯಾರಿಗೇ ಆದರೂ ಆದಾಯಕ್ಕೆ ತಕ್ಕ ಖರ್ಚು ವೆಚ್ಚಗಳನ್ನು ಪೂರೈಸಿಕೊಂಡರೆ ನೆಮ್ಮದಿಯ ಜೀವನ ಸಿಗುತ್ತದೆ. ಆ ಭಾಗದ ಜನರ ಹಣದ ವ್ಯವಹಾರದ ಅಂಕುಶ ಸಹಕಾರಿ ಸಂಘದ ಬಳಿ ಇರುತ್ತದೆ ಎಂದ ಅವರು, ಇದರಿಂದ ಜನರನ್ನು ಸಂಘ ಸನ್ಮಾರ್ಗಕ್ಕೆ ಕೊಂಡೊಯ್ಯುತ್ತದೆ ಎಂದರು.
ಸಹಕಾರಿ ಸಂಘಗಳಲ್ಲಿ ಎಲ್ಲ ರೀತಿಯ ಮಾರುಕಟ್ಟೆಯೊಂದಿಗೆ ಕೈಗಾರಿಕೆಗಳು ಆರಂಭವಾಗುವ ಸಾಧ್ಯತೆಗಳಿವೆ. ಪ್ರಾಮಾಣಿಕ ಸಿಬ್ಬಂದಿ ವರ್ಗ ಒಳ್ಳೆಯ ಆಡಳಿತ ಮಂಡಳಿಯಿಂದ ಸಂಸ್ಥೆ ಅಚ್ಚುಕಟ್ಟಾಗಿ ನಡೆಯುತ್ತದೆ ಎಂದರು.
ಅನಂತ ಭಟ್ಟ ಕರಸುಳ್ಳಿ ದಂಪತಿಗಳು ಶ್ರೀಗಳ ಪಾದಪೂಜೆ ನಡೆಸಿದರು. ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೇಕರಿ, ಉಪಾಧ್ಯಕ್ಷ ಶ್ರೀಪತಿ ಭಟ್ಟ, ಡಿ.ಆರ್.ಭಟ್ಟ, ನಿರ್ದೇಶಕರಾದ ಜಿ.ಎಸ್.ಹೆಗಡೆ, ಎಂ.ಸಿ.ಹೆಗಡೆ ಕಬ್ನಳ್ಳಿ, ರಂಗನಾಥ ಮಡಗಾಂವಕರ, ರಾಜಶೇಖರ ಭಟ್, ವಿಜಯಾ ಶ್ರೀ ಹೆಗಡೆ, ಶ್ರೀಮತಿ ಜಿ. ಹೆಗಡೆ, ಎನ್.ಟಿ.ಮಡಿವಾಳ, ಕಾರ್ಯದರ್ಶಿ ಮುರಳೀಧರ ಹೆಗಡೆ, ಸಂಘದ ಸಿಬ್ಬಂದಿಗಳು, ಸದಸ್ಯರು ಇತರರು ಇದ್ದರು.