ಸಿದ್ದಾಪುರ: ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರರಿಗೆ ಎನ್ನುವಂತೆ ನಾವು ಸಂಪಾದಿಸಿದ ಸಂಪಾದನೆಯಲ್ಲಿ ಧಾರ್ಮಿಕ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು. ಇದು ನಮ್ಮ ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಹತ್ತು ಹಲವು ಜನರಿಗೆ ಅನುಕೂಲವಾಗುತ್ತದೆ ಎಂದು ಬರಗಾಲ ಲಂಬಾಪುರದ ಶ್ರೀಕಾಲ ಭೈರವ ದೇವಾಲಯ ಟ್ರಸ್ಟ್ ಆಡಳಿತ ಮಂಡಳಿ ಅಧ್ಯಕ್ಷ ಎನ್.ಡಿ.ನಾಯ್ಕ್ ಐಸೂರ್ ಅಭಿಪ್ರಾಯಪಟ್ಟರು.
ಅವರು ಬರಗಾಲನಲ್ಲಿ ಜಾತ್ರಾ ಮಹೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾ.ಪಂ ಮಾಜಿ ಅಧ್ಯಕ್ಷ ಸಿ.ಆರ್.ನಾಯ್ಕ್ ಮಾತನಾಡಿ, ಈ ಕ್ಷೇತ್ರಕ್ಕೆ ಹಲವು ದಾನಿಗಳು ರಸ್ತೆ, ಸ್ಥಳ ದಾನ ಮಾಡಿ ಇಂದು ಈ ಉತ್ಸವ ವಿಜೃಂಭಣೆಯಿಂದ ನಡೆಯಲು ಕಾರಣರಾಗಿದ್ದಾರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದರಿಂದ ಸಂಸ್ಕಾರ, ಆಚರಣೆ ತಿಳಿದುಕೊಳ್ಳುವುದರ ಜೊತೆಗೆ ಸುಸಂಸ್ಕೃತ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದರು.
ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ನಾಯ್ಕ್, ಆಡಳಿತ ಮಂಡಳಿ ಕಾರ್ಯದರ್ಶಿ ಜಿ.ಕೆ.ನಾಯ್ಕ್ ಜಾತ್ರಾ ಕಮಿಟಿ ಅಧ್ಯಕ್ಷ ನಾಗರಾಜ್ ನಾಯ್ಕ್ ಉಪಸ್ಥಿತರಿದ್ದರು. ಜಾತ್ರೆ ಮಹೋತ್ಸವದ ಅನ್ನಸಂತರ್ಪಣೆಯ ದಾನಿಗಳಾದ ಮಾರುತಿ ಶೇಟ್ ದಂಪತಿಯನ್ನು ಸನ್ಮಾನಿಸಿದರು. ಬೆಳಿಗ್ಗೆಯಿಂದ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ಪಲ್ಲಕ್ಕಿ ಉತ್ಸವ ಊರಿನ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ಹೋಮ- ಹವನಗಳಲ್ಲಿ ಪಾಲ್ಗೊಂಡು ಹಣ್ಣು- ಕಾಯಿ, ಮಂಗಳಾರತಿ, ಕುಂಕುಮಾರ್ಚನೆ ಮುಂತಾದ ಹಲವು ಸೇವೆಗಳನ್ನು ಸಲ್ಲಿಸಿದರು. ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಪ್ರತಿವರ್ಷದಂತೆ ಈ ವರ್ಷವು ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಸಂಪಾದನೆಯಲ್ಲಿ ಅರ್ಥಪೂರ್ಣ ದಾನ ನೀಡಿ: ಎನ್.ಡಿ.ನಾಯ್ಕ್
