ಕಾರವಾರ: ಬೈತಖೋಲ್ ಲೇಡಿಸ್ ಬೀಚ್ ಗುಡ್ಡದಲ್ಲಿ ನೌಕಾನೆಲೆಯವರು ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಕಾಮಗಾರಿ ಸ್ಥಗಿತಗೊಳಿಸಿರುವ ಘಟನೆ ನಡೆದಿದೆ.
ಲೇಡಿಸ್ ಬೀಚ್ ಕದಂಬ ನೌಕಾನೆಲೆಯ ವ್ಯಾಪ್ತಿಯಲ್ಲಿದ್ದು, ನೌಕಾ ಸಿಬ್ಬಂದಿಗೆ ಸಂಚಾರಕ್ಕೆ ಅನುಕೂಲ ಆಗುವಂತೆ ಗುಡ್ಡವನ್ನು ಅಗೆದು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ಗುಡ್ಡದ ತಳಭಾಗದಲ್ಲಿ ಕೆಲವು ಕುಟುಂಬಗಳು ವಾಸವಿದ್ದು, ಮಳೆಗಾದಲ್ಲಿ ಗುಡ್ಡ ಕುಸಿತ ಉಂಟಾದಲ್ಲಿ ತೊಂದರೆ ಉಂಟಾಗಲಿದೆ. ಜತೆಗೆ ಮೀನುಗಾರಿಕಾ ಬೋಟ್ಗಳನ್ನು ಲೇಡಿಸ್ ಬೀಚ್ ಸಮೀಪ ಲಂಗರು ಹಾಕಲಾಗುತ್ತಿದ್ದು, ಇದಕ್ಕೂ ಸಮಸ್ಯೆ ಆಗಲಿದೆ. ಹೀಗಾಗಿ ಈ ಗುಡ್ಡವನ್ನು ಅಗೆಯುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಕಾಮಗಾರಿಯನ್ನು ಸ್ಥಗಿತ ಮಾಡಿಸಿದರು.
ಬಳಿಕ ಭೂದೇವಿ ದೇವಸ್ಥಾನದ ಸಮೀಪ ಸಾರ್ವಜನಿಕರು ಸಭೆ ನಡೆಸಿದ್ದು, ಸ್ಥಳಕ್ಕಾಗಮಿಸಿದ ನೌಕಾನೆಲೆಯ ಅಧಿಕಾರಿಗಳು ಆದಷ್ಟು ಶೀಘ್ರದಲ್ಲಿ ಡಿಸಿ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾಣ ಕೈಗೊಳ್ಳುವುದಾಗಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಗುಡ್ಡ ಅಗೆಯುತ್ತಿರುವ ಸ್ಥಳದಲ್ಲಿದ್ದ ಜೆಸಿಬಿ, ಟಿಪ್ಪರ್, ಹಿಟಾಚಿ ಮೊದಲಾದ ಪರಿಕರಗಳನ್ನು ಸ್ಥಳೀಯರು ವಾಪಸ್ ಕಳಿಸಿದ್ದಾರೆ. ಈ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಗುತ್ತಿಗೆದಾರರ ಬಳಿ ಯಾವುದೇ ಅನುಮತಿ ಇಲ್ಲ. ಈ ಗುಡ್ಡ ಕೊರೆಯುವದರಿಂದ ಮಳೆಗಾಲದಲ್ಲಿ ಸಾಕಷ್ಟು ತೊಂದರೆ ಆಗಲಿದ್ದು, ಈಗಾಗಲೇ ಉತ್ತರ ಕನ್ನಡದ ಕಳಚೆ, ಭಟ್ಕಳ, ಅರೆಬೈಲ್, ಅಣಶಿ ಒಳಗೊಂಡು ಹಲವಾರು ಕಡೆ ಗುಡ್ಡ ಕುಸಿದು ಆತಂಕ ಸೃಷ್ಟಿಯಾಗಿದೆ. ಅನಾಹುತಗಳಾಗಿವೆ. ಗುಡ್ಡ ಅಗೆತವನ್ನು ನಿಲ್ಲಿಸದಿದ್ದಲ್ಲಿ ಇವುಗಳ ಸಾಲಿನಲ್ಲಿ ಲೇಡಿಸ್ ಬೀಚಿನ ಗುಡ್ಡ ಕೂಡಾ ಸೇರುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.