ಜೊಯಿಡಾ: ನಾನು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತೇನೆ. ನನ್ನ ಕ್ಷೇತ್ರದಲ್ಲಿ ಯಾವ ಮಕ್ಕಳು ಶಿಕ್ಷಣ ವಂಚಿತರಾಗಬಾರದು ಎಂದು ಜೊಯಿಡಾ- ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ಪಂಚಾಯತರಾಜ್ ಇಲಾಖೆಯಿಂದ ವಿವಿಧ ಕಾಮಗಾರಿಗಳ ಚಾಲನೆ ಮತ್ತು ಜೊಯಿಡಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ನೂತನ ಕೊಠಡಿಗಳ ಉದ್ಘಾಟನೆ ಹಾಗೂ ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಹಿಂದೆ ಜೊಯಿಡಾ ತಾಲೂಕಿನಲ್ಲಿ ಶಿಕ್ಷಣ ಬಹಳ ಕಡಿಮೆ ಇತ್ತು. ಈಗ ತಾಲೂಕಿಗೆ ಕಳೆದ 10 ವರ್ಷಗಳಲ್ಲಿ ಬಹಳಷ್ಟು ಹೊಸ ಶಾಲೆಗಳನ್ನು ನಿರ್ಮಿಸಿಕೊಡಲಾಗಿದೆ. ಜೊಯಿಡಾ ಅಭಿವೃದ್ಧಿ ಹೊಂದಿದೆ. ತಾಲೂಕಿನ ಅಭಿವೃದ್ಧಿಗೆ ಬಹಳಷ್ಟು ಹಣ ಮಂಜೂರು ಮಾಡಿದ್ದೇನೆ. ಮುಂದೆ ಚುನಾವಣಾ ಬರಲಿದೆ ತಾಲೂಕಿನ ಅಭಿವೃದ್ಧಿ ಯಾವುದರಿಂದ ಆಗುತ್ತದೆ ಎಂಬುದನ್ನು ಜನರು ಅರಿಯಬೇಕು. ಮುಂದೆ ಯಾರನ್ನು ಗೆಲ್ಲಿಸಬೇಕು ಎಂಬುದು ಜನರ ಕೈಯಲ್ಲಿದೆ ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ಬಗರ್ ಹುಕ್ಕುಂ ಸಭೆಯಲ್ಲಿ ಭಾಗವಹಿಸಿದರು. ನಂತರದಲ್ಲಿ ತಾಲೂಕಾ ಆಸ್ಪತ್ರೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಘಟಕ ಉದ್ಘಾಟನೆ ಮತ್ತು ಪಬ್ಲಿಕ್ ಹೆಲ್ತ್ ಲ್ಯಾಬ್ ಅಡಿಗಲ್ಲು ಹಾಗೂ ದೇಶಪಾಂಡೆ ರುಡ್‌ಸೆಟ್ ವತಿಯಿಂದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬ್ಗಾರ, ಜಿ.ಪಂ ಮಾಜಿ ಸದಸ್ಯ ರಮೇಶ ನಾಯ್ಕ, ಜೊಯಿಡಾ ಗ್ರಾ.ಪಂ. ಅಧ್ಯಕ್ಷ ಅರುಣ ಕಾಂಬ್ರೆಕರ, ತಹಶೀಲ್ದಾರ ಪ್ರಮೋದ ನಾಯ್ಕ, ಇಓ ಆನಂದ ಬಡಕುಂದ್ರಿ, ಲೋಕೋಪಯೋಗಿ ಇಲಾಖೆಯ ಎಇಇ ವಿಜಯಕುಮಾರ್, ಜಿಲ್ಲಾ ಪಂಚಾಯತಿ ಎಇಇ ಮಹಮ್ಮದ್ ಇಝಾನ್, ಸ್ಥಳೀಯರಾದ ಸಂತೋಷ ಮಂಥೇರೋ, ಶ್ಯಾಮ ಪೊಕಳೆ ಇತರರು ಇದ್ದರು.