ಭಟ್ಕಳ: ಚಿತ್ರಾಪುರದ ಶ್ರೀಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಗಳು ಅಳ್ವೆಕೋಡಿಯ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ಮಾರಿ ದೇವಿಗೆ ಪೂಜೆ ಸಲ್ಲಿಸಿದರು. ಬಳಿಕ ಪೂರ್ವಾಹ್ನ ನಡೆದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದೇವರ ವಿಷಯದಲ್ಲಿ ಭಕ್ತಿ ಇರಲೇಬೇಕು. ನಮಗೆಲ್ಲ ತಂದೆ ತಾಯಿಯಿಂದ ನೀಡಿದ ಸಂಸ್ಕಾರದಿoದ ಭಕ್ತಿ ಶ್ರದ್ಧೆಯಿಂದ ದೇವರ ಸ್ಮರಣೆ ಮಾಡುವುದು ರೂಢಿಸಿಕೊಳ್ಳಬೇಕು. ಶ್ರೀ ದೇವಿಯ ಪ್ರತಿಷ್ಠಾಪನಾ ಕಾರ್ಯದಿಂದ ಇಲ್ಲಿ ದೈವಿ ಶಕ್ತಿಯ ಅನಾವರಣಗೊಂಡಿದೆ. ಈ ಭಾಗದಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಈ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಿಗೆ ಕೃಪೆಗೆ ಪಾತ್ರರಾಗಿದ್ದಾರೆ. ನಿರಂತರ ಭಜನೆ ಮತ್ತು ಶೃದ್ದಾ ಭಕ್ತಿಯಿಂದ ದೇವಿಯ ಪ್ರಾರ್ಥನೆ ಮಾಡಿದರೆ ಎಲ್ಲರಿಗೂ ದೇವಿ ಅಭಯವನ್ನು ನೀಡುತ್ತಾಳೆ ಎಂದರು.
ಈ ಜಾತ್ರಾ ಮಹೋತ್ಸವದಲ್ಲಿ ಸ್ವಯಂ ಸೇವಕರು, ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ಭಕ್ತಿಯಿಂದ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ದೇವಿಯ ಕೃಪೆ ಸದಾ ಇರುತ್ತದೆ. ಇವೆಲ್ಲವು ದೇವರ ನಿತ್ಯ ಉಪಾಸನೆ ಭಜನೆಯಿಂದ ಸಾಧ್ಯ. ದೇವಿಯ ಪ್ರಸಾದ ನಿಮಿತ್ತ ಮನುಷ್ಯ ಕೆಲಸ ಮಾಡಬೇಕು. ಗದ್ದಲ- ಗಲಾಟೆಯಿಲ್ಲದೇ ಶುದ್ಧ ಮನಸ್ಸಿನಿಂದ ಮಾಡಬೇಕು. ಆಗ ಮಾತ್ರ ನಮ್ಮ ಸಂಕಲ್ಪ ದೇವರಿಗೆ ಸಲ್ಲಲಿದೆ. ಕ್ಷೇತ್ರದ ಏಳಿಗೆಗೆ ಹೆಚ್ಚು ಹೆಚ್ಚು ದೇವಿಯ ಉಪಾಸನೆ ನಡೆಯಬೇಕು ಎಂದು ಹೇಳಿದರು.
ದೇವಸ್ಥಾನದ ಆಡಳಿತ ಮಂಡಳೀಯ ವತಿಯಿಂದ ಸ್ವಾಮೀಜಿಯವರಿಗೆ ಪಾದ ಪೂಜೆ ನಡೆಯಿತು. ದೇವಸ್ಥಾನದ ಟ್ರಸ್ಟಿ ನಾರಾಯಣ ದೈಮನೆ ಸ್ವಾಗತಿಸಿದರು. ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ದೇವಸ್ಥಾನದ ದರ್ಮದರ್ಶಿ ಹನುಮಂತ ನಾಯ್ಕ, ಮುಕುಂದ ಪುರಾಣಿಕ ಇದ್ದರು. ಮಧ್ಯಾಹ್ನ ನೆರದ ಭಕ್ತರಿಗೆ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. ಸಂಜೆ 6 ಗಂಟೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಗೋಕರ್ಣ ಪರ್ತ್ರಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರಿಂದ ಆಶೀರ್ವಚನ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ, ತಿಮ್ಮಪ್ಪ ಹೊನ್ನಿಮನೆ ಉಪಸ್ಥಿತರಿದ್ದರು. ರಾತ್ರಿ ಕದಂಬ ಕೌಶಿಕ ಹಾಗೂ ಕನಕಾಂಗಿ ಕಲ್ಯಾಣ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಿತು.