ಶಿರಸಿ: ಶ್ರೀ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಹುಲೇಕಲ್ಲಿನ ಶ್ರೀದೇವಿ ಶಿಕ್ಷಣ ಸಂಸ್ಥೆಯ 2022-23ನೇ ಶೈಕ್ಷಣಿಕ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನವು ಇತ್ತೀಚೆಗೆ ವಿದ್ಯುಕ್ತವಾಗಿ ನೆರವೇರಿತು. ಸಂಸ್ಥೆಯ ಗೌರವಾಧ್ಯಕ್ಷರು ಮತ್ತು ಮಹಾಪೋಷಕರಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಮಿಸ್ತ್ರಾಲ್ ಸಲ್ಯೂಷನ್ಸ್, ಬೆಂಗಳೂರು ಸಿ.ಟಿ.ಓ ಮತ್ತು ಸಂಸ್ಥಾಪಕರು ರಾಜೀವ ರಾಮಚಂದ್ರ, ವೈ.ವಿ ಆರ್ಕಿಟೆಕ್ಟ್ಸ್ ಬೆಂಗಳೂರು ಆರ್ಕಿಟೆಕ್ಟ್ ಪ್ರಿನ್ಸಿಪಾಲ್ ಮತ್ತು ಸಂಸ್ಥಾಪಕ ವಿ. ವಿಶ್ವನಾಥ್ ಇವರು ಮುಖ್ಯ ಆಮಂತ್ರಿತರಾಗಿ ಆಗಮಿಸಿದ್ದರು. ಇವರೊಂದಿಗೆ ಎಂ.ವಿ.ಹರ್ಷ ಅಡ್ಕಳ್ಳಿ ಹಾಗೂ ವಾಸುದೇವ ಬೆಂಗಳೂರು ಮತ್ತು ಮುಖ್ಯ ಆಮಂತ್ರಿತರ ಕುಟುಂಬದವರು ಉಪಸ್ಥಿತರಿದ್ದರು. ಸ್ನೇಹ ಸಮ್ಮೇಳನದ ಉದ್ಘಾಟನೆ, ಕೈಬರಹ ಪತ್ರಿಕೆಗಳ ಲೋಕಾರ್ಪಣೆ, ವಿದ್ಯಾರ್ಥಿಗಳಿಂದ ಸ್ವರಚಿತ ಕವನಗಳ ಸಂಕಲನಗನ್ನೊಳಗೊಂಡ ಕಾವ್ಯಾಂಕುರದ ಬಿಡುಗಡೆಗೆ, ವರದಿವಾಚನ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ದಾನಿಗಳಿಗೆ ಗೌರವ ಸಮರ್ಪಣೆ ನಡೆಯಿತು.
ಶ್ರೀಗಳು ಆಶೀರ್ವಾದ ಪೂರಕವಾಗಿ ಉಪನಿಷತ್ತುಗಳಲ್ಲಿ ಹೇಳಲಾದ ಮೂರು ಉಪಾಯಗಳಾದ ಶ್ರವಣ, ಮನನ, ಮತ್ತು ನಿಧಿದ್ಯಾಸನ ಇವುಗಳ ಮೂಲಕ ವಿದ್ಯಾರ್ಥಿಗಳು ಅಭ್ಯಾಸಮಾಡಿ ಹೆಚ್ಚು ಫಲಿತಾಂಶ ಗಳಿಸಬೇಕು ಎನ್ನುವುದನ್ನು ವಿವರಿಸಿದರು. ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುವುದು, ಆ ಪ್ರಶಸ್ತಿಯನ್ನು ಗಳಿಸಿಕೊಂಡವರು ನಿರಂತರ ಉಳಿಸಿಕೊಳ್ಳುವುದಕ್ಕೂ, ಪ್ರಶಸ್ತಿ ಪಡೆದುಕೊಳ್ಳದೇ ಉಳಿದವರು ಪ್ರಶಸ್ತಿ ಪಡೆದುಕೊಳ್ಳಲು ನಿರಂತರ ಪ್ರಯತ್ನ ಮಾಡುವುದೇ ಆಗಿದ್ದು, ಅಂದರೆ ಎಲ್ಲರಿಗೂ ಪ್ರಯತ್ನ ಶೀಲತೆಯೆ ಮುಖ್ಯ ಆಗಿರುತ್ತದೆ ಎನ್ನುತ್ತಾ, ಸಂಸ್ಥೆಗೆ ವಿವಿಧ ರೀತಿಯಲ್ಲಿ ಸಹಕಾರವನ್ನು ನೀಡಿದ ಎಲ್ಲರನ್ನೂ ಅಭಿನಂದಿಸುತ್ತಾ ಸರ್ವರಿಗೂ ಒಳೆಯದಾಗಲಿ ಎಂದು ಆಶೀರ್ವದಿಸಿದರು.
ಮುಖ್ಯ ಆಮಂತ್ರಿತರಾಗಿ ಮಾತನಾಡಿದ ರಾಜೀವ ರಾಮಚಂದ್ರ, ವಿದೇಶದಿಂದ ವಲಸೆ ಬರುವ ಪಕ್ಷಿಗಳ ಸಾಮರ್ಥ್ಯ ಮತ್ತು ಒಗ್ಗಟ್ಟಿನಲ್ಲಿ ಶ್ರಮವಿದೆ ಎನ್ನುವುದನ್ನು ಸವಿಸ್ತಾರವಾಗಿ ವಿವರಿಸಿದರು. ವಿ. ವಿಶ್ವನಾಥ್ರವರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಿದ್ಯಾರ್ಥಿದೆಸೆಯಲ್ಲಿ ಪಾಲಿಸುವುದರ ಕುರಿತು ವಿವರಿಸಿದರು. ಮುಖ್ಯ ಆಮಂತ್ರಿತರಿಬ್ಬರೂ ಸಂಸ್ಥೆಗೆ 45 ಗಣಕಯಂತ್ರಗಳನ್ನು ನೀಡುವುದರೊಂದಿಗೆ ಸಂಸ್ಥೆಗೆ ದೊಡ್ಡ ಪ್ರಮಾಣದ ದೇಣಿಗೆಯನ್ನು ಒದಗಿಸಿಕೊಟ್ಟರು. ಹೊಸದಾಗಿ ಆರ್ಟ್ನಲ್ಲಿ ಉತ್ತಮ ಕೌಶಲ್ಯ ತೋರಿಸಿದವರಿಗೆ ಬಹುಮಾನ ಹಾಗೂ ಅಕ್ಷರ ಫೌಂಡೇಷನ್, ಬೆಂಗಳೂರು ಇದರ ವತಿಯಿಂದ ಕಲಿಕಾ ವಿಧಾನಗಳ ಕುರಿತಾಗಿ ಇರುವ ಮಾಹಿತಿಗಳನ್ನು ಕೊಡುವುದಾಗಿ ಘೋಷಿಸಿದರು.
ವಾರ್ಷಿಕ ಸ್ನೇಹ ಸಮ್ಮೇಳನವು 2 ವಿಭಾಗಗಳಲ್ಲಿ ನಡೆದಿದ್ದು, ಬೆಳಗಿನ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ವಿಭಾಗ ಮತ್ತು ಪ್ರೌಢಶಾಲೆಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷ ಎಂ.ಎನ್. ಹೆಗಡೆ ವಹಿಸಿದ್ದರು. ಕಾರ್ಯಾದರ್ಶಿಗಳಾದ ಶಾಂತಾರಾಮ ಹೆಗಡೆ ಹಾಗೂ ಆಡಳಿತ ಮಂಡಳಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನೇರವೇರಿಸಿಕೊಟ್ಟರು. ವಾರ್ಷಿಕ ಸ್ನೇಹ ಸಮ್ಮೇಳನದ ಪ್ರಯುಕ್ತ ಮಧ್ಯಾಹ್ನದ ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.