ದಾಂಡೇಲಿ: ಇಲ್ಲಿನ ಪೊಲೀಸ್ ಉಪವಿಭಾಗದಲ್ಲಿ ಕಳೆದೆರಡು ವರ್ಷಗಳಿಂದ ಅಭಿಮಾನದಿಂದ ಕೆಲಸ ನಿರ್ವಹಿಸಿದ ಧನ್ಯತೆ ನನಗಿದೆ. ಇಲಾಖೆಯ ಮೇಲಾಧಿಕಾರಿಗಳು ನೀಡಿದ ಮಾರ್ಗದರ್ಶನ, ಉಪವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ನೀಡಿದ ಸಹಕಾರ ಹಾಗೂ ಉಪವಿಭಾಗದ ಜನತೆ ನೀಡಿದ ಸಹಕಾರ ಮತ್ತು ಬೆಲೆ ಕಟ್ಟಲಾಗದ ವಾತ್ಸಲ್ಯಮಯ ಪ್ರೀತಿಯನ್ನು ಎಂದು ಮರೆಯಲು ಸಾಧ್ಯವಿಲ್ಲ. ಇಲ್ಲಿ ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿರುತ್ತದೆ ಎಂದು ನಿರ್ಗಮಿತ ಡಿವೈಎಸ್ಪಿ ಗಣೇಶ್ ಕೆ.ಎಲ್. ಹೇಳಿದರು.
ಅವರು ನಗರ ಪೊಲೀಸ್ ಮೈದಾನದಲ್ಲಿ ನಡೆದ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ನೌಕರಿಯಲ್ಲಿ ವರ್ಗಾವಣೆ ಮತ್ತು ನಿವೃತ್ತಿ ಸಹಜ ಪ್ರಕ್ರಿಯೆ. ಕರ್ತವ್ಯದ ಅವಧಿಯಲ್ಲಿ ನಮ್ಮ ನಡವಳಿಕೆಗಳು ಮತ್ತು ಸಹಕಾರದ ಮನೋಭಾವನೆ ಹಾಗೂ ಸಮಾಜಹಮುಖಿ ವ್ಯಕ್ತಿತ್ವವೆ ನಮ್ಮ ಭವಿಷ್ಯದ ಉನ್ನತಿಗೆ ಭದ್ರ ಅಡಿಪಾಯ. ದಾಂಡೇಲಿಯoತಹ ಉಪವಿಭಾಗದಲ್ಲಿ ಎರಡು ವರ್ಷಗಳನ್ನು ಅತ್ಯಂತ ಸಂತೃಪ್ತಿಯಿoದ ಕಳೆದಿದ್ದೇನೆ. ಪರಸ್ಪರ ಸಹಾಯ, ಸೌಹಾರ್ದತೆ ಇಲ್ಲಿಯ ಜನತೆಯನ್ನು ನೋಡಿ ಕಲಿಯಬೇಕೆಂದು ಹೇಳಿ, ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ನೂತನ ಡಿವೈಎಸ್ಪಿ ಶಿವಾನಂದ ಕಟಗಿ ಮಾತನಾಡಿ, ಪೊಲೀಸ್ ಇಲಾಖೆ ಜನಸ್ನೇಹಿಯಾಗಿದ್ದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ. ಸರ್ವರ ಸಹಕಾರದಲ್ಲಿ ಅತ್ತುತ್ತಮ ಸೇವೆ ನೀಡುವ ಮೂಲಕ ಇಲಾಖೆಯ ಘನತೆಯನ್ನು ಮತ್ತಷ್ಟು ಎತ್ತಿ ಹಿಡಿಯುವ ಕಾರ್ಯವನ್ನು ಶ್ರದ್ಧೆಯಿಂದ ಮಾಡುವುದಾಗಿ ಹೇಳಿದರು.
ವರ್ಗಾವಣೆಗೊಂಡ ನಗರ ಠಾಣೆಯ ಪಿಎಸೈ ಕಿರಣ್ ಪಾಟೀಲ್ ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ವೇದಿಕೆಯಲ್ಲಿ ನಗರಸಭೆಯ ಪೌರಾಯುಕ್ತ ಆರ್.ಎಸ್.ಪವಾರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಅನಿಲ್ ನಾಯ್ಕ, ಜನತಾ ಸಂಯುಕ್ತ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯರಾದ ಎಂ.ಎಸ್.ಇಟಗಿ ಇದ್ದರು.
ಸಿಪಿಐ ಬಿ.ಎಸ್.ಲೋಕಾಪುರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸುತ್ತಾ ಗಣೇಶ್.ಕೆ.ಎಲ್ ಮತ್ತು ಕಿರಣ್ ಪಾಟೀಲ್ ಅವರ ವ್ಯಕ್ತಿತ್ವವನ್ನು ಗುಣಗಾನ ಮಾಡಿದರು. ಪಿಎಸೈ ಯಲ್ಲಪ್ಪ.ಎಸ್ ಅನಿಸಿಕೆ ವ್ಯಕ್ತಪಡಿಸಿ, ವಂದಿಸಿದರು. ಎಎಸೈ ಮಹಾವೀರ ಕಾಂಬಳೆಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕರ್ಯಕ್ರಮದ ಮುಗಿದ ಬಳಿಕ ಸ್ಥಳೀಯ ಕಲಾವಿದರುಗಳಿಂದ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ದಾಂಡೇಲಿ ಪೊಲೀಸ್ ಉಪ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು, ಗಣ್ಯ ಮಹನೀಯರು ಮತ್ತು ನಾಗರಿಕರು ಭಾಗವಹಿಸಿದ್ದರು.