ಕುಮಟಾ: ತಾಲೂಕಿನ ದೇವಗಿರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗಲಿರುವ 15 ಲಕ್ಷ ರೂ. ವೆಚ್ಚದ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಶಂಕು ಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಶಿಕ್ಷಣ ಮತ್ತು ಆರೋಗ್ಯ ನಾಣ್ಯದ ಎರಡು ಮುಖಗಳು. ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಅತ್ಯವಶ್ಯ. ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸಣ್ಣ ಪುಟ್ಟ ಖಾಯಿಲೆಗಳಿಗೆ ತಾಲೂಕಾ ಆಸ್ಪತ್ರೆಯನ್ನು ಅವಲಂಭಿಸಬಾರದು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲವರ್ಧನೆಗೆ ನಮ್ಮ ಸರ್ಕಾರ ಶ್ರಮಿಸಿದೆ. ಇದರಿಂದ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೊರೊನಾ ರೋಗವನ್ನು ಸಮರ್ಥವಾಗಿ ಎದುರಿಸಿ, ಪ್ರತಿಯೊಬ್ಬರಿಗೂ 2 ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ. ನಮ್ಮ ಸರ್ಕಾರದ ಸಾಧನೆಗಳನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು ಎಂದರು.
ದೇವಗಿರಿ ಗ್ರಾ.ಪಂ ಅಧ್ಯಕ್ಷೆ ರತ್ನಾ ಹರಿಕಂತ್ರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ಟಿ.ನಾಯ್ಕ, ಪಕ್ಷದ ಪ್ರಮುಖರಾದ ಕುಮಾರ ಮಾರ್ಕಾಂಡೆ, ಉದಯ ಭಂಡಾರಿ, ಗ್ರಾ.ಪಂ ಸದಸ್ಯರಾದ ನಾಗೇಶ ನಾಯ್ಕ, ಪಾಂಡು ಪಟಗಾರ, ದಿನಕರ ಭಂಡಾರಿ, ಸರೋಜಾ ಮಡಿವಾಳ, ಧಾರಾನಾಥ ದೇವಸ್ಥಾನದ ಮೊಕ್ತೇಸರ ಲಕ್ಷö್ಮಣ ಪ್ರಭು, ಸಮುದಾಯ ಆರೋಗ್ಯಾಧಿಕಾರಿ ವೀರೇಂದ್ರ ಮಡಿವಾಳ, ಪ್ರಮುಖರಾದ ಅನಿಲ ರೇವಣಕರ, ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಹೆಗಡೆ ಕೂಜಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.