ಯಲ್ಲಾಪುರ: ಬಿಜೆಪಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸಲು ಜ.2ರಿಂದ 12ರವರೆಗೆ ಬೂತ್ ವಿಜಯ ಅಭಿಯಾನವನ್ನು ಹಮ್ಮಿಕೊಂಡಿದೆ. ಇದೊಂದು ಪಕ್ಷವನ್ನು ಮುನ್ನಡೆಗೆ ತರುವ ಕಾರ್ಯಕ್ರಮವಾಗಿದೆ. ರಾಜ್ಯದ ಎಲ್ಲ ಬೂತ್’ಗಳಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಬಿಜೆಪಿ ಕಾರ್ಯಕರ್ತರು ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಕರೆ ನೀಡಿದರು.
ಪಟ್ಟಣದ ರವೀಂದ್ರನಗರದಲ್ಲಿ ಬಿಜೆಪಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ರವಿವಾರ ಪಟ್ಟಣ ವ್ಯಾಪ್ತಿಯ ವಿವಿಧ ವಾರ್ಡ್ ಗಳ ಬಿಜೆಪಿ ಪ್ರಮುಖರ ಸಭೆ ಯಶಸ್ವಿಯಾಗಿ ನಡೆದಿದೆ. ಜ.4 ಕ್ಕೆ ಎರಡನೇ ಹಂತದ ಕಾರ್ಯಕ್ರಮ ನಡೆಸಲಾಗುವುದು. ಒಂದು ಕಡೆ ಅಭಿವೃದ್ಧಿ ಮತ್ತೊಂದು ಕಡೆ ಸಂಘಟನೆ ಜೊತೆ ಜೊತೆಯಾಗಿಯೇ ಸಾಗಬೇಕು. ಅಂದಾಗ ಜನರ ವಿಶ್ವಾಸಗಳಿಸಲು ಸಾಧ್ಯ ಎಂದು ಹೇಳಿದರು.
ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನಾ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಬೂತ್ ಮಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಯಶಸ್ವಿಯಾದರೆ, ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಹಿಂದೆಂದಿಗಿಂತಲೂ ಅಂತರದಿಂದ ಜಯಗಳಿಸಲು ಸಾಧ್ಯ ಎಂದು ಹೇಳಿದರು.
ಹಿರಿಯ ಬಿಜೆಪಿ ಮುಖಂಡ ರಾಮು ನಾಯ್ಕ ಮಾತನಾಡಿ, ಬರುವ ಮೂರು ನಾಲ್ಕು ತಿಂಗಳು ಬಹಳಷ್ಟು ಮಹತ್ವದಾದುದು. ನಮ್ಮ ಸರಕಾರಗಳು ಮಾಡಿರುವ ಅಭಿವೃದ್ಧಿ ಸಾಧನೆಯನ್ನು ಜನರಿಗೆ ತಿಳಿಸುವ ಕಾರ್ಯ ಈ ಅವಧಿಯಲ್ಲಿ ಇನ್ನೂ ಹೆಚ್ಚು ನಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡಳ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ ಮಾತನಾಡಿ, ಎಲ್ಲ ಬೂತ್ ಗಳಲ್ಲಿಯ ಮತದಾರರನ್ನು ಬಿಜೆಪಿ ಕಡೆಗೆ ಸೆಳೆಯುವ ಪ್ರಯತ್ನದಲ್ಲಿ ನಾವು ಯಶಸ್ವಿಯಾಗುತ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ರಾಜ್ಯದಲ್ಲಿ 58 ಸಾವಿರಕ್ಕೂ ಹೆಚ್ಚು ಬೂತಗಳಲ್ಲಿ ವಿಜಯ ಅಭಿಯಾನಕ್ಕೆ ರಾಜ್ಯಾದ್ಯಂತ ಚಾಲನೆ ನೀಡಲಾಗುತ್ತಿದೆ. ಈ ಅಭಿಯಾನ ಕಾರ್ಯಕ್ರಮಕ್ಕಷ್ಟೆ ಸೀಮಿತವಾಗಬಾರದು, ಅಭಿಯಾನದ ಬಗ್ಗೆ ಮುಖಂಡರು ನಿರಂತರವಾಗಿ ಗಮನಿಸಿ ಮಾರ್ಗದರ್ಶನ ಮಾಡಬೇಕು. ಪಟ್ಟಣದಲ್ಲಿ 16 ತಾಲೂಕಿನಲ್ಲಿ 96 ಬೂತಗಳಲ್ಲಿ, ಪ್ರತಿ ಬೂತ್ ಮಟ್ಟದಲ್ಲಿ ಗರಿಷ್ಟ ಮತವನ್ನು ಅಲ್ಲಿಯ ವಿಸ್ತಾರಕರು ಖಚಿತಪಡಿಸಿಕೊಳ್ಳಬೇಕು. ನಾವು ಬೂತ್ ಗೆದ್ದರೇ ರಾಜ್ಯವನ್ನು ಗೆದ್ದ ಹಾಗೆ ಎನ್ನುವ ಮನೋಭಾವನೆ ಪ್ರತಿ ಕಾರ್ಯಕರ್ತರಲ್ಲಿ ಬರಬೇಕು. ಬಿಜೆಪಿಗೆ ನೀಡಿರುವ ಮತ ವ್ಯರ್ಥವಾಗಿಲ್ಲ ಎನ್ನುವ ಭಾವನೆ ಮತದಾರರಲ್ಲಿ ಮೂಡಿಸಬೇಕು ಎಂದು ಹೇಳಿದರು.
ಸುಬ್ಬಣ್ಣ ಬೋಳ್ಮನೆ ಮಾತನಾಡಿದರು. ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಹಿರಿಯ ಬಿಜೆಪಿ ಮುಖಂಡ ಉಮೇಶ ಭಾಗ್ವತ, ಮಂಡಳ ಉಪಾಧ್ಯಕ್ಷ ಶಿರೀಶ ಪ್ರಭು, ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ, ಪ.ಪಂ ನಾಮ ನಿರ್ದೇಶಿತ ಸದಸ್ಯೆ ಕುಮುದಾ, ಪ.ಪಂ ಸದಸ್ಯೆ ಜ್ಯೋತಿ ನಾಯ್ಡು, ಮಂಡಳ ಪ್ರಮುಖ ಮುರುಳಿ ಹೆಗಡೆ, ರವೀಂದ್ರನಗರ ಬೂತ್ ಅಧ್ಯಕ್ಷ ಬಾಬು ದೇಸಾಯಿ ವೇದಿಕೆಯಲ್ಲಿದ್ದರು.
ವಿನೋದ ತಳೇಕರ, ಬಾಬಾಸಾಬ ಆಲನ್, ಶಕೀಲ ಅಹ್ಮದ, ಶಿವರಾಜ, ಸಂಜೀವ ಜಾದವ್, ಪ್ರತಾಪ ಶಿವಯೋಗಿ, ಪರಶುರಾಮ ಯಾಮಕೆ ಮುಂತಾದವರು ಭಾಗವಹಿಸಿದ್ದ ಪ್ರಮುಖರಾಗಿದ್ದರು. ಮಂಡಳ ಪ್ರಧಾನ ಕಾರ್ಯದರ್ಶಿಗಳಾದ ಡಾ.ರವಿ ಭಟ್ಟ ಬರಗದ್ದೆ ಸ್ವಾಗತಿಸಿ, ನಿರೂಪಿಸಿದರು. ಮಂಡಳ ಪ್ರಧಾನ ಕಾರ್ಯದರ್ಶಿ ಪ್ರಸಾದ ಹೆಗಡೆ ವಂದಿಸಿದರು.