ಬೆಂಗಳೂರು: ಕರ್ನಾಟಕದೆಲ್ಲೆಡೆ ಬಿಜೆಪಿ ಗಾಳಿ ಬೀಸುತ್ತಿದೆ. 2023ರಲ್ಲಿ ಅದರಿಂದ ಬಿಜೆಪಿ ಗೆಲುವು ಸಾಧಿಸುವುದು ಖಚಿತ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮಂಡ್ಯದ ಎಂ.ಸಿ. ರಸ್ತೆ, ಪ್ರವಾಸಿ ಮಂದಿರ ಹತ್ತಿರದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿಜಿ ನೇತೃತ್ವದಲ್ಲಿ ಭಾರತವು ವಿಶ್ವಮಾನ್ಯ ರಾಷ್ಟ್ರವಾಗಿದೆ. ಭಾರತದ ಕಾಶ್ಮೀರದ ಸಮಸ್ಯೆ, ನಕ್ಸಲೈಟ್ ಸಮಸ್ಯೆ ಸೇರಿ ಎಲ್ಲ ಸಮಸ್ಯೆಗಳನ್ನು ಅಮಿತ್ ಶಾ ಅವರು ಬಗೆಹರಿಸಿದ್ದಾರೆ. ಅಮಿತ್ ಶಾ ಅವರ ನೇತೃತ್ವದಲ್ಲಿ ಚುನಾವಣಾ ತಂತ್ರಗಾರಿಕೆಗೆ ಸದಾ ಯಶಸ್ಸು ಸಿಕ್ಕಿದೆ. 2023ರ ಮೇ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ನುಡಿದರು.
ಕಾಂಗ್ರೆಸ್- ಜೆಡಿಎಸ್ ಈ ಭಾಗಕ್ಕೆ ನ್ಯಾಯ ಕೊಟ್ಟಿಲ್ಲ. ಜನರು ಈ ಪಕ್ಷಗಳ ಬಗ್ಗೆ ಬೇಸತ್ತಿದ್ದಾರೆ. ಈ ಬಾರಿ ಮಂಡ್ಯದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಪಡೆಯಲಿದೆ. ಈ ಭಾಗದ ನೀರಾವರಿ ಯೋಜನೆಗಳಿಗೆ ನಮ್ಮ ಸರಕಾರ ಕಾಯಕಲ್ಪ ನೀಡಲಿದೆ. ಮೈಶುಗರ್ ಕಾರ್ಖಾನೆಯನ್ನು ಸರಕಾರವೇ ಮತ್ತೆ ಪ್ರಾರಂಭಿಸಿದೆ. ರೈತರು, ಕಬ್ಬು ಬೆಳೆಗಾರರಿಗೆ ಆತ್ಮವಿಶ್ವಾಸ ತುಂಬಿದ್ದೇವೆ. ಕಾರ್ಖಾನೆಯಲ್ಲಿ ಮುಂದೆ ಎಥೆನಾಲ್ ತೆಗೆಯಲಿದ್ದೇವೆ ಎಂದು ತಿಳಿಸಿದರು.
ಎಥೆನಾಲ್ ಇಲ್ಲದ ಕಾರ್ಖಾನೆಗಳಲ್ಲೂ ಕಬ್ಬು ಪ್ರತಿ ಟನ್ಗೆ 100 ರೂ. ಹೆಚ್ಚಳ ಮಾಡುವ ಆದೇಶ ಹೊರಡಿಸಿದ್ದೇನೆ. ಯೋಗ್ಯ ಬೆಲೆ ಕೊಟ್ಟು ಬಂದಿದ್ದೇನೆ. ಮಾತು ಕೊಟ್ಟಂತೆ ನಡೆಯುವ ಸರಕಾರ ನಮ್ಮದು. ಇಡೀ ಕರ್ನಾಟಕದ ಅಭಿವೃದ್ಧಿ ನಮ್ಮ ಸಂಕಲ್ಪ ಎಂದು ತಿಳಿಸಿದರು.
ಸೂಪರ್ ಫಾಸ್ಟ್ ರೈಲು, ಹೈವೇ ನೀಡಿದ ಪಕ್ಷ ಬಿಜೆಪಿ. ಕಾಂಗ್ರೆಸ್ ಕೇವಲ ದೌರ್ಭಾಗ್ಯ ನೀಡಿತ್ತು. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಪಕ್ಷ. ಬಿಬಿಎಂಪಿ, ಬಿಡಿಎ, ಸಣ್ಣ ನೀರಾವರಿಯಲ್ಲಿ ಮಾತ್ರವಲ್ಲದೆ ಹಾಸ್ಟೆಲ್ಗಳ ದಿಂಬು ಹಾಸಿಗೆಯಲ್ಲೂ ಭ್ರಷ್ಟಾಚಾರ ಇವರದು. ಅನ್ನ ಭಾಗ್ಯದಲ್ಲೂ ಕನ್ನ ಭಾಗ್ಯ ಇವರದಾಗಿತ್ತು ಎಂದು ಟೀಕಿಸಿದರು. ಕರ್ನಾಟಕದ ನೈಜ ಅನ್ನದಾತ ನರೇಂದ್ರ ಮೋದಿ ಅವರು ಎಂದು ವಿವರಿಸಿದರು.
ರೈತ ವಿದ್ಯಾನಿಧಿಯಿಂದ 10 ಲಕ್ಷ ಕುಟುಂಬಗಳಿಗೆ ಪ್ರಯೋಜನವಾಗಿದೆ. ಗ್ರಾಮೀಣ ಕರಕುಶಲಕರ್ಮಿಗಳಿಗೆ ನೆರವಾಗಿದ್ದೇವೆ. ಸ್ತ್ರೀಶಕ್ತಿ ಸಂಘಗಳಿಗೆ ಸ್ವಾವಲಂಬನೆಗೆ ನೆರವು ಕೊಟ್ಟಿದ್ದೇವೆ. ಕಾಂಗ್ರೆಸ್ಸಿಗರ ಕೇವಲ ಭಾಷಣದಿಂದ ಸಾಮಾಜಿಕ ನ್ಯಾಯ ಲಭಿಸುವುದಿಲ್ಲ ಎಂದು ಟೀಕಿಸಿದರು.
ಮೀಸಲಾತಿ ಹೆಚ್ಚಿಸಿ ನಾವು ಸಾಮಾಜಿಕ ನ್ಯಾಯ ಕೊಟ್ಟಿದ್ದೇವೆ. ಸಕಾರಾತ್ಮಕ, ಸಾಮರಸ್ಯ, ಅಭಿವೃದ್ಧಿಗಾಗಿ ನಾವು ಶ್ರಮಿಸಿದ್ದೇವೆ. ಕಾಂಗ್ರೆಸ್- ಜೆಡಿಎಸ್ ಪಕ್ಷಗಳ ಅಭಿವೃದ್ಧಿಶೂನ್ಯ ಕಪ್ಪು ಬಿಳುಪು ಸಿನಿಮಾ ನೋಡಿದ್ದೀರಿ ಎಂದ ಅವರು, ಬಿಜೆಪಿ ಈ ಭಾಗದ ಕರ್ನಾಟಕವನ್ನು ಸುವರ್ಣ ಕರ್ನಾಟಕ ಮಾಡಲಿದೆ ಎಂದು ತಿಳಿಸಿದರು. ನಮಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ನಿಮ್ಮ ವಿಶ್ವಾಸಕ್ಕೆ ಚ್ಯುತಿ ಆಗದಂತೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವ ಅಮಿತ್ ಶಾ ಅವರು ಸಮಾವೇಶವನ್ನು ಉದ್ಘಾಟಿಸಿ ಮಾರ್ಗದರ್ಶನ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ಕುಮಾರ್ ಕಟೀಲ್ ಅವರು ಮಾತನಾಡಿ, ಮಂಡ್ಯದಲ್ಲಿ ಪರಿವರ್ತನೆ ಆಗಿದೆ. ಮುಂದಿನ ಚುನಾವಣೆಯಲ್ಲಿ 7ಕ್ಕೆ ಏಳೂ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ನುಡಿದರು.
ಕಣ್ಣೀರಿನ ರಾಜಕೀಯ ನಿಂತು ಅಭಿವೃದ್ಧಿಯ ರಾಜಕೀಯ ಇಲ್ಲಿ ಆರಂಭವಾಗಲಿದೆ. ಶ್ರಮಜೀವಿಗಳು, ರೈತರ ಹೆಸರಿನಲ್ಲಿ ಇಲ್ಲಿ ರಾಜಕೀಯ ಮಾಡಿದ್ದರು. ಆದರೆ, ಮಣ್ಣಿನ ಮಗ ಯಡಿಯೂರಪ್ಪ ಅವರು ರೈತರಿಗೆ ನೆರವು ಒದಗಿಸಿದವರು ಎಂದು ವಿವರಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮಾತನಾಡಿ, ಮಂಡ್ಯ ಯಾರ ಜಹಗೀರೂ ಅಲ್ಲ. ಮಂಡ್ಯದ ಜನರು ಸ್ವಾಭಿಮಾನಿ ಜನ ಎಂಬ ಸಂದೇಶವನ್ನು ನೀಡಬೇಕಾಗಿದೆ ಎಂದು ಮನವಿ ಮಾಡಿದರು.
ಹಾಲಿಗೆ ಸಬ್ಸಿಡಿ ಕೊಟ್ಟದ್ದು ಬಿಜೆಪಿಯೇ ಹೊರತು ಕಾಂಗ್ರೆಸ್, ಜೆಡಿಎಸ್ ಅಲ್ಲ. ಕಿಸಾನ್ ಸಮ್ಮಾನ್ ಯೋಜನೆಯನ್ನೂ ನಾವೇ ಜಾರಿಗೊಳಿಸಿದೆವು. ಜನಧನ್ ಖಾತೆ, ಆಯುಷ್ಮಾನ್, ಯಶಸ್ವಿನಿ ಯೋಜನೆ ಮರುಜಾರಿ, ಶೌಚಾಲಯ ಯೋಜನೆ, ಗ್ಯಾಸ್ ಸಂಪರ್ಕ ಎಲ್ಲರಿಗೂ ಕೊಟ್ಟೆವು. ನಾವು ಜಾತಿ ನೋಡಿಲ್ಲ. 2 ಸಕ್ಕರೆ ಕಾರ್ಖಾನೆ ಪುನರಾರಂಭ ಮಾಡಿದ್ದು, ಸುಮ್ಮನೆ ನ್ಯಾಯ ಕೇಳುತ್ತಿಲ್ಲ. ಮೀಸಲಾತಿ ಹೆಚ್ಚಳ ಸೇರಿ ಜನರಿಗೆ ನ್ಯಾಯ ಕೊಟ್ಟ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಮೂಡಲಬಾಗಿಲ ಹನುಮಪ್ಪ- ಮುಲ್ಲಾಸಾಬಿಗೂ ನಡುವಿನ ಚುನಾವಣೆ ಇದು. ಹನುಮಪ್ಪನಿಗೆ ನ್ಯಾಯ ಕೊಡಲು ನಿಮ್ಮ ಮತ ಇರಲಿ. ಹನುಮಪ್ಪನಿಗೆ ನ್ಯಾಯ ಕೊಡಲು ತಯಾರಿದ್ದೀರಾ ಎಂದು ಪ್ರಶ್ನಿಸಿದರು. ಟಿಪ್ಪು ವರ್ಸಸ್ ಒಡೆಯರ್ ಚುನಾವಣೆ ಇದು ಎಂದು ನೆನಪಿಸಿದರು. ಉರಿಗೌಡ, ದೊಡ್ಡನಂಜೇಗೌಡರ ರಕ್ತ ನಮ್ಮಲ್ಲಿ ಹರಿಯುತ್ತಿದೆ. ಉರಿಗೌಡ, ದೊಡ್ಡನಂಜೇಗೌಡರ ಪ್ರತಿಮೆ ನಿರ್ಮಾಣ ಆಗಬೇಕಿದೆ ಎಂದು ತಿಳಿಸಿದರು.
ಕನ್ನಡದ ಬದಲು ಪರ್ಶಿಯನ್ ಭಾಷೆಯನ್ನು ಆಡಳಿತ ಭಾಷೆಯಾಗಿ ಹೇರಿದ ಮತಾಂಧ ಟಿಪ್ಪು ಕನ್ನಡ ಪ್ರೇಮಿ ಆಗುವುದು ಹೇಗೆ? ಮೈಸೂರನ್ನು ನಜರಾಬಾದ್, ಮಡಿಕೇರಿಯನ್ನು ಜಫಾರಾಬಾದ್, ಹಾಸನವನ್ನು ಕೈಮಾಬಾದ್ ಎಂದು ಕರೆದಿದ್ದು ಅದೇ ಟಿಪ್ಪು ಅಲ್ಲವೇ ಎಂದು ನೆನಪು ಮಾಡಿದರು. ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂಬುದು ನೆನಪಿರಲಿ ಎಂದು ತಿಳಿಸಿದರು.
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಸಿ.ಎನ್. ಅಶ್ವತ್ಥ ನಾರಾಯಣ್ ಮಾತನಾಡಿ, ಸಿಎಂ ಯಡಿಯೂರಪ್ಪ ಅವರನ್ನು ಕೊಟ್ಟ ನಾಡು ಮಂಡ್ಯವು ಆರ್ಥಿಕ- ಸಾಮಾಜಿಕ- ಅಭಿವೃದ್ಧಿ ವಿಚಾರದಲ್ಲಿ ಹಿನ್ನಡೆ ಸಾಧಿಸಿದೆ. ಅವಕಾಶ ಕೊಟ್ಟ ಜನರಿಗೆ ಜೆಡಿಎಸ್ ನಾಯಕರು ಕಥೆಗಳನ್ನು ಹೇಳಿಕೊಂಡು ನಂಬಿಕೆದ್ರೋಹ ಮಾಡಿದ್ದಾರೆ. ಮೈಶುಗರ್ ಮುಚ್ಚಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಹಳೆ ಮೈಸೂರಿಗೆ ಜೆಡಿಎಸ್ ಪಕ್ಷ ಅನ್ಯಾಯ ಮಾಡಿತ್ತು ಎಂದು ಟೀಕಿಸಿದರು.
ಕಣ್ಣೀರು, ನಾಟಕ ಮಾಡುತ್ತ ಬಂದ ಜೆಡಿಎಸ್ ಪಕ್ಷಕ್ಕೆ ಈ ಬಾರಿ ಪಾಠ ಕಲಿಸಬೇಕು. ಕಾಂಗ್ರೆಸ್- ಜೆಡಿಸ್ ಗಳು ಕುಟುಂಬಕ್ಕೆ ಸೀಮಿತ ಪಕ್ಷಗಳು. ಹಿಂದುತ್ವ ಗೌರವ ನೀಡದ ಪಕ್ಷಗಳಿವು. ಆದ್ದರಿಂದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡಲು 2023ರ ಚುನಾವಣೆಯಲ್ಲಿ ಮಂಡ್ಯ- ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ರಾಜ್ಯದ ಸಚಿವ ಕೆ.ಸಿ. ನಾರಾಯಣಗೌಡ ಅವರು ಮಾತನಾಡಿ, ಮಂಡ್ಯದಲ್ಲಿ 4ರಿಂದ 5 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗೊಡ್ಡು ಬೆದರಿಕೆಗೆ ನಾವು ಮಣಿಯುವುದಿಲ್ಲ. ಬಿಜೆಪಿ ಎಂದರೆ ಅಭಿವೃದ್ಧಿಯ ಸಂಕೇತ. ಅದು ಕೆಲಸ ಮಾಡುತ್ತಿರುವ ವೈಖರಿಯನ್ನು ಜನತೆ ಗಮನಿಸಿದ್ದಾರೆ ಮತ್ತು ಬಿಜೆಪಿಯನ್ನು ಗೆಲ್ಲಿಸುವುದು ಖಚಿತ ಎಂದು ತಿಳಿಸಿದರು.