ಶಿರಸಿ : ಯಕ್ಷಗಾನಕ್ಕೆ ಸಾಹಿತ್ಯ ಮಾನ್ಯತೆ ದೊರೆಯಬೇಕಿದೆ. ಯಕ್ಷಗಾನದ ಭಾಷಾ ಜ್ಞಾನ, ವೈಖರಿ ಅಗಾಧವಾಗಿದ್ದು ಕನ್ನಡದ ಸಾಹಿತ್ಯ ಜಗತ್ತನ್ನು ಶ್ರೀಮಂತಗೊಳಿಸಿದೆ ಆದುದರಿಂದ ಯಕ್ಷಗಾನ ಸಾಹಿತ್ಯವೆಂಬುದನ್ನು ಪರಿಗಣಿಸಬೇಕಾದ ಅಗತ್ಯವಿದೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು ಹೇಳಿದರು.
ಅವರು ತಾಲೂಕಿನ ದೊಡ್ನಳ್ಳಿಯ ಶ್ರೀ ಶಂಭುಲಿಂಗೇಶ್ವರ ಸಭಾಭವನದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಹಣಜೀಬೈಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪೌರಾಣಿಕ ಯಕ್ಷೋತ್ಸವ -2022 ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದ ಅವರು, ಅನೇಕ ತತ್ವ ಪರಾಮಾರ್ತಿಕ ವಿಚಾರಗಳನ್ನು ಸರಳವಾಗಿ ತಮ್ಮ ಮಾತು, ನೃತ್ಯದ ಮೂಲಕ ಲೌಕಿಕ ಜಗತ್ತಿಗೆ ತಿಳಿಸುವಂತದ್ದು ಅತ್ಯಂತ ಪ್ರಾಚೀನ ಹಾಗೂ ಪವಿತ್ರ ಯಕ್ಷಗಾನ. ಯಕ್ಷಗಾನ ಕಲಾವಿದರು ತಮ್ಮ ಸರ್ವಾಂಗೀಣ ಅಭಿನಯದ ಮೂಲಕ ಅನಕ್ಷರಸ್ಥರು ಕೂಡ ಹಿಂದಿನ ಪರಂಪರೆಯನ್ನು ಅರ್ಥೈಸಿಕೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ದೇವತಾ ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶ ತಪಸ್ವಿಗಳು ಹಾಗೂ ಮಹಾತ್ಮರು ತಪಸ್ಸನ್ನು ಮಾಡಿದ ಪವಿತ್ರವಾದ ತಪೋ ಭೂಮಿ. ಯಕ್ಷಗಾನ ಕಲೆಯೂ ಕೂಡಾ ದೈವೀ ಆರಾಧನಾ ಕಲೆಯಾಗಿದ್ದು ನಮ್ಮ ದೇಶದ ಸಂಸ್ಕೃತಿಯ ಹಿರಿಮೆ, ಗರಿಮೆಯನ್ನು ಹೆಚ್ಚಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಂಭುಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಪರಮೇಶ್ವರ್ ಭಟ್,
ದೊಡ್ನಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶ್ರುತಿ ಕಾನಡೆ, ದೇವಸ್ಥಾನ ಮಂಡಳಿ ಅಧ್ಯಕ್ಷ ಶ್ರೀಪಾದ ಜಿ ಹೆಗಡೆ, ಜಿ ಸಂತೋಷ್ ಕುಮಾರ್ ಲೋಕದ್ವನಿ ಪ್ರಧಾನ ವರದಿಗಾರರ, ಸುಬ್ರಾಯ ಎನ್ ಹೆಗಡೆ, ಚಂದ್ರಶೇಖರ ರಾವ್ ನಿವೃತ್ತ ಪ್ರಾಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.