ಶಿರಸಿ: ಭಾರತೀಯ ಅಂಚೆ ಇಲಾಖೆ ಶಾಲಾ ಮಕ್ಕಳಲ್ಲಿ ಅಂಚೇಚೀಟಿ ಸಂಗ್ರಹದ ಹವ್ಯಾಸವನ್ನು ಉತ್ತೇಜಿಸುವ ಸಲುವಾಗಿ ಎರಡು ಹಂತಗಳಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಸಿದ ದೀನ್ ದಯಾಳ್ ಸ್ಪರ್ಶ ಯೋಜನೆಯ ಸ್ಕಾಲರ್‌ಷಿಪ್ ಪರೀಕ್ಷೆಯಲ್ಲಿ ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಕುಮಾರ ಪ್ರಮಥ ಎಮ್.ಎಚ್. ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಶ್ರಾವಣಿ ಮಹಾಲೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಅಂಚೆ ಇಲಾಖೆಯ ಸೀನಿಯರ್ ಫಿಲಾಟೆಲಿಸ್ಟ್ಸ್ ಸುಬೇದಾರ್ ರಾಮು ಈ., ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ನರಸಿಂಹಮೂರ್ತಿ , ಪ್ರೊ.ವಿ.ಎಸ್.ಹೆಗಡೆ ಇವರು ನಡೆಸಿದ ತರಬೇತಿ ಕಾರ‍್ಯಾಗಾರಗಳು, ಫಿಲ್ಯಾಟಲಿ ಕ್ಲಬ್ ಕೋಆರ‍್ಡಿನೆಟರ್ ಅಂಚೆ ಇಲಾಖೆಯ ಮಂಜುನಾಥ ನಾಯ್ಕ್ ನೀಡಿದ ಸಕಾಲಿಕ ಮಾಹಿತಿ ಹಾಗೂ ಶಾಲೆಯ ಫಿಲ್ಯಾಟಲಿ ಕ್ಲಬ್ ಸಂಯೋಜಕಿ ಶಿಕ್ಷಕಿ ಶ್ರೀಮತಿ ಮುಕ್ತಾ ನಾಯ್ಕ್ ಇವರ ಮಾರ‍್ಗದರ್ಶನ ಪುಷ್ಠಿ ನೀಡಿದೆ. ಶಿರಸಿ ಲಯನ್ಸ ಶಾಲೆಯ ಫಿಲೆಟಲಿ ಕ್ಲಬ್ ಅತ್ಯಂತ ಕ್ರಿಯಾಶೀಲವಾಗಿದ್ದು, ಈವರೆಗೆ 13 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ದೀನ್ ದಯಾಳ್ ಸ್ಪರ್ಷ ಯೋಜನೆಯ ಸ್ಕಾಲರ್ಷಿಪ್ ಪಡೆದು ದಾಖಲೆ ಪ್ರಮಾಣದಲ್ಲಿ ಈ ಯೋಜನೆಗೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳು ಪ್ರತಿವರ್ಷವೂ ಇಂತಹ ಸಾಧನೆಗೈಯುವಲ್ಲಿ ಯಶಸ್ವಿಯಾಗಲೆಂದು ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆ ಶುಭ ಹಾರೈಸಿದ್ದಾರೆ. ಎಲ್ಲಾ ವಿಜೇತ ವಿದ್ಯಾರ್ಥಿಗಳಿಗೆ, ಮಾರ್ಗದರ್ಶಿ ಶಿಕ್ಷಕರಿಗೆ, ತರಬೇತಿ ನೀಡಿದ ತರಬೇತುದಾರರಿಗೆ ಹಾಗೂ ಸಹಕರಿಸಿದ ಪಾಲಕರಿಗೆ ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ, ಶಿರಸಿ ಲಯನ್ಸ ಕ್ಲಬ್ ಬಳಗ, ಶಾಲೆಯ ಶಿಕ್ಷಕ-ಶಿಕ್ಷಕೇತರ ವೃಂದ, ಸಮಸ್ತ ಲಯನ್ಸ ಶಾಲಾ ಪಾಲಕ ಪರಿವಾರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.