ಭಟ್ಕಳ: ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ಹೆಸ್ಕಾಂ ಭಟ್ಕಳ ವಿಭಾಗದ ವತಿಯಿಂದ ಬಿ.ಸಿ.ಎ ವಿದ್ಯಾರ್ಥಿಗಳಿಗೆ ವಿದ್ಯುತ್ ಸಂರಕ್ಷಣೆ ಹಾಗೂ ಸಮರ್ಪಕ ಬಳಕೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಕೆ.ಜಿ., ವಿದ್ಯುತ್ ಜನರ ಬಾಳಿಗೆ ಬೆಳಕಾಗಿದೆ. ಹೀಗಾಗಿ ಅದನ್ನು ಹಿತಮಿತವಾಗಿ ಬಳಸಿ ಎಂದು ಕರೆ ನೀಡಿದರು.
ಸಹಾಯಕ ಎಂಜಿನಿಯರ್ ಶಿವಾನಂದ ನಾಯ್ಕ, ವಿದ್ಯುತ್ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು. ಮತ್ತೋರ್ವ ಸಹಾಯಕ ಎಂಜಿನಿಯರ್ ರಮೇಶ್ ಮೇಸ್ತಾ, ವಿದ್ಯುತ್ ಉಪಕರಣಗಳ ಬಗ್ಗೆ ಹಾಗೂ ವಿದ್ಯುಚ್ಛಕ್ತಿ ಇಲಾಖೆಯ ಕಾರ್ಯನಿರ್ವಹಣೆ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಬಿಸಿಎ ವಿಭಾಗದ ಉಪಪ್ರಾಂಶುಪಾಲ ವಿಖ್ಯಾತ್ ಪ್ರಭುರವರು ಸರ್ವರನ್ನು ಸ್ವಾಗತಿಸಿ ಕೊನೆಯಲ್ಲಿ ವಂದನಾರ್ಪಣೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಹೆಸ್ಕಾಂ ಭಟ್ಕಳ ವಿಭಾಗದ ವತಿಯಿಂದ ವಿದ್ಯುಚ್ಛಕ್ತಿಯ ಕುರಿತು ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಎಲ್.ಇಡಿ ಬಲ್ಬುಗಳನ್ನು ವಿತರಿಸುವುದರ ಮೂಲಕ ವಿದ್ಯುತ್ ಮಿತಬಳಕೆಯ ಕುರಿತು ಪ್ರೇರೇಪಿಸಲಾಯಿತು.