ದಾಂಡೇಲಿ: ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ನಾಗರಿಕರ ಪಾತ್ರ ಎಂಬ ವಿಷಯದ ಕುರಿತು ಚಿಂತನ-ಮಂಥನ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರೋಹಿಣಿ ಡಿ.ಬಸಾಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾನು ಎಂಬ ಸಂಕುಚಿತ ಮನೋಭಾವನೆಯನ್ನು ಬಿಟ್ಟು ತನ್ನ ಸಮಾಜ, ತನ್ನ ದೇಶ ಎಂಬ ವಿಶಾಲ ಕ್ಷೇತ್ರವನ್ನು ಕಾಣುವ ದೃಷ್ಟಿಯುಳ್ಳ ವ್ಯಕ್ತಿಗಳ ಸಮೂಹವನ್ನು ನಾವು ಸುಸಂಸ್ಕೃತ ಜನಾಂಗವೆಂದು ಕರೆಯಬಹುದು. ರಾಷ್ಟ್ರದ ಅಸ್ತಿತ್ವ ಪ್ರತಿಯೊಬ್ಬ ಪ್ರಜೆಯನ್ನು ಆದರಿಸಿಕೊಂಡಿದೆ. ಬಡವನಾಗಲಿ, ಬಲ್ಲಿದನಾಗಲಿ ಅವನು ತನ್ನ ಕರ್ತವ್ಯವನ್ನು ಮರೆತನೆಂದರೆ ದೇಶದ ಏಳಿಗೆಗೆ ಹಾನಿಯಾದಂತೆ ಎಂಬ ಅರಿವನ್ನು ಪ್ರತಿಯೊಬ್ಬ ನಾಗರಿಕನು ಹೊಂದಿರಬೇಕೆಂದು ಕರೆ ನೀಡಿದರು. ಸುಸಂಸ್ಕೃತ ಜನಾಂಗ ನಿರ್ಮಾಣ ಮಾಡುವುದಕ್ಕೆ ರಾಷ್ಟ್ರ ನಿರ್ಮಾಣವೆಂದು ಹೇಳಬಹುದು. ಜನಾಂಗವೆಂದರೆ ಒಬ್ಬನಲ್ಲ. ಪರಸ್ಪರ ಸುಖ ಶಾಂತಿಯನ್ನು ಬಯಸುವುದರ ಮೂಲಕ ತನ್ನ ಏಳಿಗೆಯನ್ನು ಸಾಧಿಸಿಕೊಳ್ಳುವುದೇ ಮನುಷ್ಯತ್ವದ ಲಕ್ಷಣ ಎಂದು ಅಭಿಪ್ರಾಯಿಸಿದರು.
ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಈ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಬದುಕುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಸಂವಿಧಾನದ ಆಶಯಗಳನ್ನು ಮೈಗೂಡಿಸಿಕೊಂಡು ಸದೃಢ ರಾಷ್ಟ್ರ ನಿರ್ಮಾಣದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ನಾಯ್ಕರ್, ಪಿಎಸೈ ಐ.ಆರ್.ಗಡ್ಡೇಕರ್, ಧಾರವಾಡದ ಜೆ.ಎಸ್.ಎಸ್ ಸಕ್ರಿ, ಕಾನೂನು ವಿದ್ಯಾಲಯದ ಪ್ರಾಚಾರ್ಯ ಬಿ.ಆರ್.ದರಗದ್, ವಕೀಲ ಹಾಗೂ ಗಡಿ ತಜ್ಞ ಡಾ.ರವೀಂದ್ರ, ಎನ್.ತೋಟಿಗೇರ, ರಾಜ್ಯ ಮಾನವ ಹಕ್ಕುಗಳ ಹಿತರಕ್ಷಣಾ ಮಂಡಳಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಕಾಶ ಬಿ.ಐಹೊಳ್ಳಿ, ಕರ್ನಾಟಕ ರಾಜ್ಯ ರಜಪೂತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿತಿನ್ ಸಿಂಗ್ ಎನ್.ರಜಪೂತ್, ಐ.ಎಚ್.ಆರ್.ಸಿಯ ರಾಜ್ಯ ಕಾರ್ಯನಿರ್ವಾಹಕ ನಿರ್ದೇಶಕ ಅಕ್ಬರ್ ಖೋಜಾ, ನಿವೃತ್ತ ಪ್ರಾಚಾರ್ಯರಾದ ಯು.ಎಸ್.ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ವಿ.ಆರ್.ಹೆಗಡೆ ಮೊದಲಾದವರು ಇದ್ದರು.