ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಕುರಿತಾಗಿ ಕೈಗೊಂಡ ಮುಂಜಾಗ್ರತೆ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಜೂಮ್ನಲ್ಲಿ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಕೋವಿಡ್ ಕುರಿತಾಗಿ ಸರ್ಕಾರದ ಮಾರ್ಗದರ್ಶನವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಜಿಲ್ಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರದ ನಾಯಕ, ಜಿಲ್ಲೆಯಲ್ಲಿ 2020 ಮತ್ತು 21ರಲ್ಲಿ ಕೋವಿಡ್ ಕುರಿತಾಗಿ ಕೈಗೊಂಡ ಕ್ರಮ ಹಾಗೂ ಸ್ಥಿತಿಗತಿಗಳ ಕುರಿತ ಮಾಹಿತಿ ನೀಡಿದರು. 2020ರಲ್ಲಿ ಸುಮಾರು 16 ಸಾವಿರ ಕೋವಿಡ್ ಕೇಸ್ಗಳಿದ್ದು, ಅದರಲ್ಲಿ 186 ಮಂದಿ ಮರಣ ಹೊಂದಿದ್ದಾರೆ. 2021ರಲ್ಲಿ 42 ಸಾವಿರ ಕೋವಿಡ್ ಪ್ರಕರಣಗಳಿದ್ದು, ಅದರಲ್ಲಿ 606 ಮಂದಿ ಮೃತಪಟ್ಟಿದ್ದಾರೆ. 2022ರಲ್ಲಿ 15 ಸಾವಿರ, ಅದರಲ್ಲಿ 48 ಮಂದಿ ಮೃತಪಟ್ಟಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ 11 ಲಕ್ಷ (ಶೇ 99.64) ಮೊದಲನೇ ಡೋಸ್ ಲಸಿಕೆ, ಎರಡನೇ ಡೋಸ್ನಲ್ಲಿ ಶೇ 100ರಷ್ಟು ಸಾಧನೆ ಮಾಡಿದ್ದೇವೆ. ಇಲ್ಲಿಯವರೆಗೆ 3 ಲಕ್ಷದಷ್ಟು ಬೂಸ್ಟರ್ ಡೋಸ್ ನೀಡಲಾಗಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೂಸ್ಟರ್ ಡೋಸ್ ಲಸಿಕೆ ನೀಡಲು ಕ್ರಮ ವಹಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಈಗಾಗಲೇ ಗಂಟಲು ದ್ರವ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಈವರೆಗೆ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. 5ಟಿ ಟೆಸ್ಟ್, ರೋಗಿಗಳಿಗೆ ಚಿಕಿತ್ಸೆ ನೀಡುವುದು ಹಾಗೂ ಲಸಿಕೆ ನೀಡಲು ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಖಂಡೂ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಹಾಗೂ ತಾಲೂಕು ಆರೋಗ್ಯ ಅದಿಕಾರಿಗಳು ಸಭೆಯಲ್ಲಿದ್ದರು.