ಶಿರಸಿ: ಇಲ್ಲಿನ ಶ್ರೀ ಮಾರಿಕಾಂಬಾ ಸರಕಾರಿ ಹೈಸ್ಕೂಲಿನಿಂದ 1958 ರ ಎಸ್ ಎಸ್ ಎಲ್ ಸಿ ತೇರ್ಗಡೆಯಾದ ವಿದ್ಯಾರ್ಥಿಗಳು ನಗರದ ರಾಘವೇಂದ್ರ ಮಠದ ಕಲ್ಯಾಣ ಮಂಟಪದಲ್ಲಿ ಕಲೆತು ವಿದ್ಯಾರ್ಥಿ ಜೀವನದ ಮೆಲಕು ಹಾಕಿದರು. 25 ಕ್ಕೂ ಅಧಿಕ ವಿದ್ಯಾರ್ಥಿಗಳು ಒಟ್ಟುಗೂಡಿ, ದೇವದಾಸ್ ಮಾಡಗೇರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿಕೊಂಡರು. ಗತ ವರ್ಷಗಳ ಸವಿ-ಕಹಿ ನೆನಪುಗಳು, ಹಿಂದಿಗುರುವೃಂದಗಳ ನೆನಪು ಮತ್ತು ತಮ್ಮ ಜೀವನೋದ್ದಾರಕ್ಕೆ ಅವರುಗಳ ಕೊಡುಗೆ, ಶಾಲೆಯಿಂದ ಹೊರಬಂದ ಸಹಪಾಠಿಗಳ ಸಾಧನೆ, ದೇಶ-ವಿದೇಶಗಳಲ್ಲಿ ನೀಡಿದ ಸೇವೆ, ನೆರವು ಹಾಗೂ ಕಾಣಿಕೆ ಅಗಲಿ ಹೋದ ಸಹಪಾಠಿಗಳ ನೆನಪು ಮಾಡಿಕೊಂಡರು. ಡಿಜಿಟಲ್ ಮಾಧ್ಯಮದ ಮುಖಾಂತರ ಹಳೆ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಲು ತೀರ್ಮಾನಿಸಿದರು.
ಪ್ರೊಫ಼ೆಸ್ಸರ್ ಗೊಪಾಲ್ ಕೃಷ್ಣ ಕಡೇಕೋಡಿ, ಈ ಸಂಘಟನೆಯ ವಿಷಯ, ಉದ್ದೇಶ, ಘಟನೆಗಳು, ಸದಸ್ಯರ ಸಾಧನೆ, ಕೊಡುಗೆ, ಸೇವೆ ಇತ್ಯಾದಿ ಯಾದಿಗಳನ್ನು ಸವಿಸ್ತಾರವಾಗಿ ಪಿ ಪಿ ಟಿ ಮುಖಾಂತರ ತೋರಿಸಿದರು. ಸಭೆಗೆ ದೂರ ದೂರ ಊರು ದೇಶಗಳಿಂದ ಆಗಮಿಸಿದ ವಾಸಂತಿ ಕಾಮತ್, ಪ್ರಮೋದಾ ಮತ್ತಿಹಳ್ಳೀ, ಬಿ.ಡಿ.ಹೆಗಡೆ ಹಾಗೇ ಅನೇಕರು ಆಗಮಿಸಿದ್ದರು.
ಸಭೆಗೆ ಆಗಮಿಸಿದ ಮಾರಿಕಾಂಬಾ ಹೈಸ್ಕೂಲಿನ ಉಪ ಪ್ರಾಚಾರ್ಯ ರಾಜೇಶ್ ವಿ ನಾಯ್ಕ ಹಾಗೂ ಪ್ರಾಧ್ಯಾಪಕ ಎನ್ ಪಿ. ಭಾಗ್ವತ್ ಅವರು ಸಭೆಯನ್ನು ಉದ್ದೇಶಿಸಿ ಮಾತಾಡಿದರು. ಕಕ್ಕೋಡ ಮಹಬಲೇಶ್ವರ ಭಟ್ಟ ವಂದಿಸಿದರು.