ಶಿರಸಿ: ನಗರದ ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಎಜ್ಯುಕೇಶನ್ ಸೊಸೈಟಿಯು ಶಿರಸಿ ಲಯನ್ಸ ಕ್ಲಬ್ ಸುವರ್ಣ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ “ಸಂಗೀತ ಸಿಂಚನ” ಕಾರ್ಯಕ್ರಮವು ಕಿಕ್ಕಿರಿದು ಸೇರಿದ್ದ ಸಂಗೀತಾಭಿಮಾನಿಗಳಿಗೆ ರಸದೂಟ ಬಡಿಸುವಲ್ಲಿ ಯಶಸ್ವಿಯಾಯಿತು.
ಸಂಗೀತ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಪದ್ಮಶ್ರೀ ಪಂ. ವೆಂಕಟೇಶಕುಮಾರ ಧಾರವಾಡ, ತಮ್ಮ ನಗುಮೊಗದ ಎಂದಿನ ಹಾಸ್ಯ ಮಾತಿನಲ್ಲಿ ಸಂಗೀತ ಕಛೇರಿ ನಡೆಸಿಕೊಡುತ್ತ ಸರಿಸುಮಾರು ಎರಡುವರೆ ಗಂಟೆಗೂ ಮಿಕ್ಕಿ ಸಭೆಯನ್ನು ಮಂತ್ರ ಮುಗ್ಧಗೊಳಿಸಿದರು. ಆರಂಭಿಕವಾಗಿ ರಾಗ್ ಛಾಯಾನಟ್ನ್ನು ವಿಸ್ತಾರವಾಗಿ ಹಾಡುತ್ತ ನಂತರದಲ್ಲಿ ರಾಗ್ ಕೌಂಸಿ ಕಾನಡಾವನ್ನು ವೈವಿಧ್ಯಮಯವಾಗಿ ಪ್ರಸ್ತುತಗೊಳಿಸಿದರು. ಆ ನಂತರದಲ್ಲಿ ರಾಗ್ ಕಾಫೀಯಲ್ಲಿ ಹಾಡುತ್ತ ಜನಪ್ರಿಯ ದಾಸರ ಪದ, ವಚನಗಳನ್ನು ಹಾಡಿ ರಂಜಿಸಿದರು. ಜನಾಪೇಕ್ಷೆ ಮೇರೆಗೆ ಜನಪ್ರಿಯ ರಚನೆಗಳಾದ ಗಜಮುಖನೆ ಸಿದ್ಧಿದಾಯಕನೆ, ನೀನ್ಯಾಕೋ ರಂಗ ನಿನ್ನ ಹಂಗ್ಯಾಕೊ ಹಾಗೂ ಅಕ್ಕ ಕೇಳವ್ವ ಕನಸೊಂದ ಕಂಡೆಯನ್ನು ವೈಭವೋಪೇತವಾಗಿ ಹಾಡಿ, ಕೊನೆಯಲ್ಲಿ ರಾಗ ಭೈರವಿಯೊಂದಿಗೆ ಸಂಗೀತ ಸಿಂಚನ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದಾಗ ಸಭೆಯಲ್ಲಿದ್ದ ಎರಡು ಸಾವಿರಕ್ಕೂ ಹೆಚ್ಚು ಜನ ಎದ್ದು ನಿಂತು ಗೈದ ಕರತಾಡನ ಮುಗಿಲು ಮುಟ್ಟಿತ್ತು. ಸಂಗೀತ ಕಚೇರಿಗೆ ಹಾರ್ಮೋನಿಯಂನಲ್ಲಿ ಮಂಗಳೂರು ಎಕ್ಸ್ಪರ್ಟ್ ಕಾಲೇಜಿನ ನರೇಂದ್ರ ನಾಯಕ ಹಾಗೂ ತಬಲಾದಲ್ಲಿ ರಾಜೇಂದ್ರ ನಾಕೋಡ್, ಹಿನ್ನೆಲೆಯ ತಂಬುರಾದಲ್ಲಿ ರಾಘವ ಹೆಗಡೆ, ತಾಳದಲ್ಲಿ ಅನಂತ ಮೂರ್ತಿರವರು ಸಾಥ್ ನೀಡಿದರು.
ಪದ್ಮಶ್ರೀ ವೆಂಕಟೇಶಕುಮಾರ ಗಾಯನ ಪೂರ್ವದಲ್ಲಿ ಸಂಘಟಿಸಿದ್ದ ಸಿತಾರ್ ವಾದನದಲ್ಲಿ ಸಿತಾರ್ ವಾದಕ ಅಂಕುಶ ನಾಯಕ್ರವರಿಂದ ಸಿತಾರ ವಾದನ ಕಾರ್ಯಕ್ರಮ ನಡೆದಿದ್ದು ಜನ ಮೆಚ್ಚುಗೆಗೆ ಪಾತ್ರವಾಯಿತು. ತಬಲಾದಲ್ಲಿ ರಾಜೇಂದ್ರ ನಾಕೋಡ ಸಹಕರಿಸಿದರು.
ಸಂಗೀತ ಸಿಂಚನ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಕರ್ನಾಟಕ ಕಲಾಶ್ರೀ ಪಂಡಿತ ಎಂ. ಪಿ. ಹೆಗಡೆ ಪಡಿಗೇರೆ ಮಾತನಾಡಿ ಶಿಕ್ಷಣ ಸಂಸ್ಥೆಯೊಂದು ತನ್ನ ಸುವರ್ಣ ಸಂಭ್ರಮದ ಆಚರಣೆಗಾಗಿ ಹಿರಿಯ ಅನುಭವಿ ಸಂಗೀತಗಾರರಿಂದ ಶಾಸ್ತ್ರೀಯ ಬದ್ಧವಾದ ಕಾರ್ಯಕ್ರಮ ಏರ್ಪಡಿಸಿ ಅಭಿಮಾನಿಗಳಿಗೆ ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದದ್ದು. ಶಾಲಾ ಪಠ್ಯಕ್ರಮದೊಂದಿಗೆ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸಂಗೀತಾಭ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ಮಾರ್ಗದರ್ಶಿಸುವುದು ಅವರ ಭವಿಷ್ಯದಲ್ಲಿ ಸಾಧನೆಯ ಗುರಿ ತಲುಪಲು ಸಹಾಯಕವಾಗುತ್ತದೆ. ಈ ನಿಟ್ಟಿನಲ್ಲಿ ಲಯನ್ಸ ಶಾಲೆ ಎಲ್ಲರಿಗೂ ಮಾದರಿಯಾಗಿದೆ ಎನ್ನುತ್ತ ತಮ್ಮ ಹಾಗೂ ಪಂ. ವೆಂಕಟೇಶ ಕುಮಾರರ ಸುಧೀರ್ಘ ಒಡನಾಟ ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ ಶಿರಸಿ ಲಯನ್ಸ್ ಕ್ಲಬ್ ವತಿಯಿಂದ ಇತ್ತೀಚೆಗಷ್ಟೇ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಭಾಜನರಾದ ಪಂಡಿತ್ ಎಂ.ಪಿ. ಹೆಗಡೆ ಪಡಿಗೆರೆಯವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ತ್ರಿವಿಕ್ರಮ ಪಟವರ್ಧನ,ಲಯನ್ಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಯನ್ ಪ್ರೋ ಎನ್ ವಿ.ಜಿ. ಭಟ್, ಉಪಾಧ್ಯಕ್ಷರಾದ ಎಂ.ಜೆ.ಎಫ್. ಲಯನ್ ಪ್ರಭಾಕರ ಹೆಗಡೆ,ಸಹಕಾರ್ಯದರ್ಶಿಗಳಾದ ಲಯನ್ ವಿನಯ್ ಹೆಗಡೆ ಬಸವನಕಟ್ಟೆ, ಉಸ್ತಾದ್ ಪಂಡಿತ್ ರಫೀಕ್ ಖಾನ್, ಲಯನ್ಸ ಶಿಕ್ಷಣ ಸಂಸ್ಥೆಯ ಸದಸ್ಯರುಗಳಾದ ಲಯನ್ ಲೋಕೇಶ ಹೆಗಡೆ ಪ್ರಗತಿ, ಲಯನ್ ಶ್ಯಾಮಸುಂದರ ಭಟ್, ಲಯನ್ ಶ್ರೀಕಾಂತ ಹೆಗಡೆ, , ಲಯನ್ಸ ರೀಜನಲ್ ಚೇರ್ ಪರ್ಸನ್ ಎಂ.ಜೆ.ಎಫ್. ಲಯನ್ ಜ್ಯೋತಿ ಭಟ್ಟ, ಲಯನ್ಸ್ ಶಾಲಾ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಎಂ.ಜೆ.ಎಫ್. ಶ್ರೀಮತಿ ಪ್ರತಿಭಾ ಪ್ರಭಾಕರ ಹೆಗಡೆ ಕಾರ್ಯಕ್ರಮ ನಿರೂಪಿಸಿ ಕಲಾವಿದರನ್ನು ಪರಿಚಯಿಸಿದರೆ, ಶಿರಸಿ ಲಯನ್ಸ ಕ್ಲಬ್ ಅಧ್ಯಕ್ಷರಾದ ಎಂ.ಜೆ.ಎಫ್. ಲಯನ್ ತ್ರಿವಿಕ್ರಮ ಪಟವರ್ಧನ್ ಅಧ್ಯಕ್ಷೀಯ ಮಾತುಗಳನ್ನಾಡಿ ಲಯನ್ಸ ಕ್ಲಬ್ ಕಾರ್ಯಚಟುವಟಿಕೆ ವಿವರಿಸಿದರು. ಶಿರಸಿ ಲಯನ್ಸ ಕ್ಲಬ್ ಕಾರ್ಯದರ್ಶಿಗಳಾದ ಎಂ.ಜೆ.ಎಫ್. ಲಯನ್ ರಮಾ ಪಟವರ್ಧನರವರು ಸ್ವಾಗತಿಸಿದರು. ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಲಯನ್. ಪ್ರೋ ರವಿ ನಾಯ್ಕ ವಂದನಾರ್ಪಣೆಗೈದರು.