ಅಂಕೋಲಾ: ವಿದ್ಯಾರ್ಥಿ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು ಎಂದು ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಮಂಜುನಾಥ ಇಟಗಿ ಕರೆ ನೀಡಿದರು.
ಕರ್ನಾಟಕ ಸಂಘ ಅಂಕೋಲಾ ಜೈಹಿಂದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಜೀವನ ಮೌಲ್ಯಗಳು ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಉತ್ತಮ ಸಾಮಾಜಿಕ ವ್ಯವಸ್ಥೆ ಮತ್ತು ಭವಿಷ್ಯ ನಿರ್ಮಾಣಕ್ಕಾಗಿ ಉತ್ತಮ ಮನೋಭಾವ ಮತ್ತು ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರವೀಂದ್ರ ಕೇಣಿ, ಸರಳ ಬದುಕೇ ಶ್ರೇಷ್ಠ. ಅತಿ ಆಸೆ ಪ್ರಯೋಜನವಿಲ್ಲ ಎಂದು ಸಾರುವ ನೀತಿಕಥೆಯೊಂದಿಗೆ ಮಕ್ಕಳಿಗೆ ಮನದಟ್ಟು ಮಾಡಿದರು. ಇನ್ನೋರ್ವ ಅತಿಥಿ ನಾಗೇಂದ್ರ ತೊರ್ಕೆ ಮಾತನಾಡಿ, ನಮ್ಮ ಕನ್ನಡ ಭಾಷೆಯ ಬಗ್ಗೆ ಅಭಿಮಾನವಿರಬೇಕು. ಜೊತೆಗೆ ಅನ್ಯ ಭಾಷೆಯನ್ನು ದ್ವೇಷಿಸದೇ ಗೌರವದಿಂದ ಕಾಣುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ವಿದ್ಯಾರ್ಥಿಗಳಾದ ವೃದ್ಧಿ ಭಟ್ಟ ಸಂಗಡಿಗರು ಸ್ವಾಗತಗೀತೆ ಹಾಡಿದರು. ಜೈಹಿಂದ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕ ಜೀವನ ಶೆಟ್ಟಿ ಕರ್ನಾಟಕ ಸಂಘ ಅಂಕೋಲಾದ ರಚನಾತ್ಮಕ ಕಾರ್ಯಕ್ರಮದ ಕುರಿತು ಶ್ಲಾಘಿಸುತ್ತ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು. ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ರಾಜೀವ ನಾಯಕ ವಹಿಸಿಕೊಂಡಿದ್ದರು. ಸಂಘದ ಸಹ ಕಾರ್ಯದರ್ಶಿ ವಾಸುದೇವ ನಾಯಕ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಪುಷ್ಪಾ ಅಂಕೋಲೆಕರ ಕೊನೆಯಲ್ಲಿ ವಂದಿಸಿದರು. ಸಂಸ್ಥೆಯ ಶಿಕ್ಷಕ- ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.