ಹೊನ್ನಾವರ: ಜ.12ರಂದು ಆಚರಿಸಲ್ಪಡುವ ಸ್ವಾಮಿ ವಿವೇಕಾನಂದ ಜಯಂತಿಯನ್ನು ವ್ಯವಸ್ಥಿತವಾಗಿ ನಡೆಸುವ ಪ್ರಯುಕ್ತ ತಾಲೂಕ ಪಂಚಾಯತ ಸಭಾಭವನದಲ್ಲಿ ಸಭೆ ನಡೆಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಶ್ರದ್ಧೆಯಿಂದ ಮತ್ತು ವಿಶಿಷ್ಟವಾಗಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ವರ್ಷದ ಸ್ವಾಮಿ ವಿವೇಕಾನಂದ ದಿನಾಚರಣೆಯ ಪ್ರಯುಕ್ತ ಯುವಕ ಹಾಗೂ ಯುವತಿ ಸಂಘಗಳ ಕ್ರೀಯಾಶೀಲ ಚಟುವಟಿಕೆಗಳನ್ನು ಆಧರಿಸಿ ಅವರಿಗೆ ಪ್ರಶಸ್ತಿ ನೀಡುವುದು ಮತ್ತು ಉತ್ತಮ ಯುವಕ- ಯುವತಿ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು. ಇದರ ಜೊತೆಗೆ ತಾಲೂಕಿನ ಪ್ರಾಥಮಿಕ ವಿಭಾಗದ ಮಕ್ಕಳಿಗೆ ದೇಶಭಕ್ತಿ ಗೀತೆ ಸ್ಪರ್ಧೆ, ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಭಾವಚಿತ್ರ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲು ನಿರ್ಧರಿಸಲಾಯಿತು. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡುವುದೆಂದು ತೀರ್ಮಾನಿಸಲಾಯಿತು.
ಅಂದು ಸಂಜೆ 4 ಗಂಟೆಯಿoದ ತಾಲೂಕಿನ ಎಲ್ಲಾ ಯುವಕ ಹಾಗೂ ಯುವತಿ ಸಂಘದ ಹಾಗೂ ಸ್ವ ಸಹಾಯ ಗುಂಪಿನ ಸದಸ್ಯರಿಗೆ ವಿವಿಧ ಸ್ಫರ್ಧೆಗಳನ್ನು ನಡೆಸಲು ತೀರ್ಮಾನಿಸಲಾಯಿತು. ಸಂಜೆ ಪ್ರಾಥಮಿಕ ವಿಭಾಗದ ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಛದ್ಮವೇಷ ಸ್ಪರ್ಧೆ ಆಯೋಜಿಸಲು ತಿರ್ಮಾನಿಸಲಾಯಿತು. ಅಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಜೇತರೆಲ್ಲರಿಗೂ ಬಹುಮಾನ ವಿತರಣೆ ಮಾಡಲಾಗುವುದು. ತದನಂತರ ಸಾಂಸ್ಕೃತಿಕ ವೈಭವವನ್ನು ಮಾಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ನಾಯ್ಕ ಮೂಡ್ಕಣಿ, ತಾಲೂಕಿನ ವಿವಿಧ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.