ಹೊನ್ನಾವರ: ಮೂಡಬಿದ್ರೆಯ ಆಳ್ವಾಸನಲ್ಲಿ ಭಾರತ ಸ್ಕೌಟ್ಸ್- ಗೈಡ್ಸ್ ವತಿಯಿಂದ ನಡೆಯಲಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮಕ್ಕೆ ಹೊರಟಿರುವ ತಾಲೂಕಿನ 200 ವಿದ್ಯಾರ್ಥಿಗಳನ್ನು ಮಂಗಳವಾರ ಹೊನ್ನಾವರದ ಪೊಲೀಸ್ ಮೈದಾನದಲ್ಲಿ ವಿದ್ಯುಕ್ತವಾಗಿ ಬೀಳ್ಕೊಡಲಾಯಿತು.
ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎಸ್.ನಾಯ್ಕ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ಸಂಸ್ಕೃತಿಯಿoದ ಯುವ ಜನರ ಏಕತೆ ಧ್ಯೇಯವನ್ನಿಟ್ಟುಕೊಂಡು ಒಂದು ವಾರಗಳ ಕಾಲ ಮೂಡಬಿದರೆಯ ಆಳ್ವಾಸನಲ್ಲಿ ನಡೆಯುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಜಗತ್ತಿನ ವಿವಿಧ ದೇಶಗಳ ಸುಮಾರು 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಗಹಿಸುತ್ತಿದ್ದಾರೆ. ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 200 ಜನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಇದರಿಂದ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವದ ಬೆಳವಣಿಗೆಗೆ ಸುವರ್ಣಾವಕಾಶ ಎಂದು ಹೇಳಿ, ಭಾಗವಹಿಸುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯ ಕಡೆಗೆ ಶಿಕ್ಷಕರು ಹೆಚ್ಚಿನ ಗಮನ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸುಧೀಶ ನಾಯ್ಕ, ತಾಲೂಕಾ ಕಾರ್ಯದರ್ಶಿ ಕೆ.ಎಂ.ಹೆಗಡೆ, ಜಿಲ್ಲಾ ಉಪಾಧ್ಯಕ್ಷೆ ಸಾಧನಾ ಬರ್ಗಿ, ಹೊನ್ನಾವರ ಪೊಲೀಸ್ ಠಾಣೆಯ ಸಾವಿತ್ರಿ ನಾಯಕ, ಭಾರತ ಸ್ಕೌಟ್ಸ್- ಗೈಡ್ಸ್ನ ಕರಿಸಿದ್ಧಪ್ಪ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು. ತಾಲೂಕಾ ಕಾರ್ಯದರ್ಶಿ ಎಂ.ಎನ್.ಗೌಡ ಸ್ವಾಗತಿಸಿ, ಶಾರದಾ ಹೆಗಡೆ ವಂದಿಸಿದರು.