ಶಿರಸಿ: ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ನಡೆಸುವ ತಾಲೂಕಿನ ಯಡಹಳ್ಳಿಯ ವಿದ್ಯೋದಯ ವಿದ್ಯಾಲಯದಲ್ಲಿ ‘ಹಳೆ ವಿದ್ಯಾರ್ಥಿಗಳ ಸಮಾವೇಶ’, ‘ಗುರು ನಮನ’ ಕಾರ್ಯಕ್ರಮವನ್ನು ಡಿ.25,ರವಿವಾರದಂದು ಹಮ್ಮಿಕೊಳ್ಳಲಾಗಿದೆ.
1955 ರಲ್ಲಿ ಪ್ರಾರಂಭಗೊಂಡ ಈ ವಿದ್ಯಾ ಸಂಸ್ಥೆಯಲ್ಲಿ ಈವರೆಗೆ ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಒಂದೇ ದಿನ ಸಮಾವೇಶ ನಡೆಸುತ್ತಿರುವದು ಸಂಸ್ಥೆಯ ಇತಿಹಾಸದಲ್ಲಿ ಕೂಡ ಪ್ರಥಮದ್ದೇ ಆಗಿದೆ. ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜಮುಖಿಯಾಗಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದು, ವಿಜ್ಞಾನ, ತಂತ್ರಜ್ಞಾನ, ಕೃಷಿ, ಹೈನುಗಾರಿಕೆ, ಪತ್ರಿಕೋದ್ಯಮ, ಸಮಾಜ ಸೇವಾ ಸಂಸ್ಥೆ, ಲೆಕ್ಕ ಪರಿಶೋಧನೆ, ಉಪನ್ಯಾಸ, ಸಾಹಿತ್ಯ, ಸಂಗೀತ, ನೃತ್ಯ, ಸೈನಿಕ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಹೆಸರು ಮಾಡಿದ್ದು ವಿದ್ಯೋದಯದ ಹೆಮ್ಮೆಯಾಗಿದೆ.
ವಿಶಾಲವಾದ ಕ್ರೀಡಾಂಗಣ, ಶಾಂತ ಪರಿಸರ, ಗ್ರಾಮೀಣ ಕೃಪಾಂಕ ಸಹಿತ ಅತ್ಯುತ್ತಮ ಗ್ರಂಥಾಲಯ, ನುರಿತ ಬೋಧಕ ವರ್ಗದ ಜೊತೆ ನಿರಂತರ ವಿದ್ಯಾದಾನ ಮಾಡುತ್ತಿದೆ. ಈ ಸಂಸ್ಥೆಯಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳ ಸಮಾವೇಶ ಇದಾಗಿದೆ.
ಡಿ.25ರ ಬೆಳಿಗ್ಗೆ 10ರಿಂದ ಸಮಾವೇಶ ಆರಂಭವಾಗಲಿದ್ದು, ಉದ್ಘಾಟನೆಯನ್ನು ಹಿರಿಯ ವಿಜ್ಞಾನ ಲೇಖಕ, ಶಾಲೆಯ ಹಳೆ ವಿದ್ಯಾರ್ಥಿ ನಾಗೇಶ ಹೆಗಡೆ ಬಕ್ಕೆಮನೆ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಎಸ್.ಆರ್.ಹೆಗಡೆ ಮಶೀಗದ್ದೆ ವಹಿಸಿಕೊಳ್ಳಲಿದ್ದಾರೆ. ವೇದಿಕೆಯಲ್ಲಿ ಸಂಚಾಲನಾ ಸಮಿತಿಯ ಸಂಚಾಲಕರಾದ ಎಸ್.ಕೆ.ಭಾಗವತ, ಎಂ.ಎನ್.ಹೆಗಡೆ ಬಳಗಂಡಿ, ಭಾಸ್ಕರ ಹೆಗಡೆ ಯಡಹಳ್ಳಿ, ಹಳೆ ವಿದ್ಯಾರ್ಥಿ ಸಂಘದ ಭಾಸ್ಕರ ಹೆಗಡೆ ಕಾಗೇರಿ, ಸಂಸ್ಥೆ ಉಪಾಧ್ಯಕ್ಷ ಆರ್.ವಿ.ಭಾಗವತ್, ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ನಿರಂಜನ ಹೆಗಡೆ, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಆರ್.ಟಿ.ಭಟ್ಟ, ಮುಖ್ಯಾಧ್ಯಾಪಕ ಕೆ.ಜಿ.ಭಟ್ಟ ಇತರರು ಇರಲಿದ್ದಾರೆ.
ಬಳಿಕ 11ಕ್ಕೆ ಹಳೆ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ಹಾಗೂ ಮಧ್ಯಾಹ್ನ 2ಕ್ಕೆ ಹಳೆ ವಿದ್ಯಾರ್ಥಿ ಸಂಘದ ಬಲವರ್ಧನೆ ಚಿಂತನಾ ಸಭೆ ನಡೆಯಲಿದ್ದು, ಮಧ್ಯಾಹ್ನ 3ಕ್ಕೆ ಗುರು ನಮನ ಕಾರ್ಯಕ್ರಮ ಜರುಗಲಿದೆ. ವಿದ್ಯೋದಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.