ಕುಮಟಾ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿ, ಲವ್ ಜಿಹಾದ್‌ನ್ನು ತಡೆಯುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಸದ್ಯ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಲವ್ ಜಿಹಾದ್ ತಡೆಯಲು ಸಾದ್ಯವಾಗುತ್ತಿಲ್ಲ. ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಇಸ್ಲಾಮ್‌ಗೆ ಮತಾಂತರ ಮಾಡುವ ಕೃತ್ಯ ಹೆಚ್ಚುತ್ತಿವೆ. ಆದರೂ ಈ ಕುರಿತಾದ ಮತಾಂತರ ಪ್ರಕರಣ ದಾಖಲಾಗುವುದಿಲ್ಲ. ಈ ಗಂಭೀರ ಸಮಸ್ಯೆಗೆ ಪರಿಹಾರವಾಗಿ ರಾಜ್ಯದಲ್ಲಿ ಸಹ ಉತ್ತರ ಪ್ರದೇಶದ ಮಾದರಿಯಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಕಠಿಣವಾಗಿ ಅನುಷ್ಠಾನ ಮಾಡಲು ವಿಶೇಷ ಲವ್ ಜಿಹಾದ್ ವಿರೋಧಿ ಪೊಲೀಸ್ ದಳವನ್ನು ಸ್ಥಾಪನೆ ಮಾಡಬೇಕೆಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶರತ್ ಕುಮಾರ್ ನಾಯ್ಕ್ ಮಾತನಾಡಿ, ಕರ್ನಾಟಕದಲ್ಲಿ 2014 ರಿಂದ 2019 ರ ವರೆಗೆ 21,000 ಯುವತಿಯರು ನಾಪತ್ತೆಯಾಗಿದ್ದಾರೆ. ಈ ಎಲ್ಲ ಗಂಭೀರ ಘಟನೆಗಳನ್ನು ಗಮನಕ್ಕೆ ತಗೆದುಕೊಂಡು ಸರ್ಕಾರವು ರಾಜ್ಯದಿಂದ ಮಹಿಳೆಯರು ಮತ್ತು ಹುಡುಗಿಯರ ನಾಪತ್ತೆಯ ಹಿಂದೆ ಏನಾದರೂ ಪಿತೂರಿ ಇದೆಯೇ ಅಥವಾ ಅದರ ಹಿಂದೆ ಯಾವುದಾದರೂ ಲವ್ ಜಿಹಾದ್’ ಇದೆಯೇ ಎಂದು ತನಿಖೆ ಮಾಡಲು ಗೃಹ ಕಚೇರಿ ಸ್ವತಂತ್ರ ತಂಡವನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಹಿಂದೂ ಜಾಗರಣ ವೇದಿಕೆಯ ಶಿರಸಿ ವಿಭಾಗದ ಸಂಚಾಲಕರಾದ ಭಾಸ್ಕರ್ ನಾಯ್ಕ್ ಅವರು ಮಾತನಾಡಿ, ಲವ್ ಜಿಹಾದನ್ನು ಸರ್ವಶಕ್ತಿ ಉಪಯೋಗಿಸಿ ಮಟ್ಟ ಹಾಕಬೇಕು ಇಲ್ಲದಿದ್ದರೆ ಈ ಭಾರತ ಭಾರತವಾಗಿ ಉಳಿಯಲು ಸಾಧ್ಯವಿಲ್ಲ. ಇಂದು ಹಲಾಲ್ ಜಿಹಾದ್ ನ ಮೂಲಕ ಭಾರತವನ್ನು ಇಸ್ಲಾಮಿಕರಣ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ನಾವು ಆಸ್ಪದ ನೀಡಬಾರದು ಎಂದು ಕರೆ ನೀಡಿದರು.
ಮನವಿಯನ್ನು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ರವಾನಿಸಲಾಯಿತು. ಪ್ರತಿಭಟನೆಯಲ್ಲಿ ಬಿ.ಜೆ.ಪಿ ಮಂಡಲ ಅಧ್ಯಕ್ಷ ಹೇಮಂತ ಗಾಂವಕರ್, ಮಾಜಿ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ, ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಮಹೇಶ್ ನಾಯ್ಕ್, ಎಂ ಆರ್ ಭಟ್, ಬಿ.ಜೆ.ಪಿಯ ಪ್ರಮುಖರಾದ ಪ್ರಶಾಂತ್ ನಾಯ್ಕ್, ವಿಶ್ವನಾಥ ನಾಯ್ಕ್, ನಿವೃತ್ತ ಸಿ.ಪಿ.ಐ ಪರಮೇಶ್ವರ ಗುನಗ, ರಾಧಾಕೃಷ್ಣ ಪೈ, ಹಿಂದೂ ಜನಜಾಗೃತಿ ಸಮಿತಿಯ ಶರತ್‌ಕುಮಾರ್ ನಾಯ್ಕ್, ಸಂದೀಪ್ ಭಂಡಾರಿ, ಅರುಣ ನಾಯ್ಕ್, ಪ್ರಕಾಶ್ ಶೆಟ್ಟಿ, ಅಶೋಕ್ ಆಚಾರಿ, ಚೈತನ್ಯ ಆಚಾರಿ, ನಾಗೇಂದ್ರ ಆಚಾರಿ, ಸನಾತನ ಸಂಸ್ಥೆಯ ಗೀತಾ ಶಾನಭಾಗ, ಸಹನಾ ಭಂಡಾರಿ, ದುರ್ಗಿ ಮುಕ್ರಿ, ಉಮಾ ಪೈ ಇತರರು ಇದ್ದರು.