ಶಿರಸಿ : ಯಕ್ಷಗಾನ ನಮ್ಮ ನಾಡಿನ ಶ್ರೀಮಂತ ಕಲೆ; ಅದರ ಒಂದು ಪ್ರಕಾರವಾದ ತಾಳಮದ್ದಳೆ ಕನ್ನಡ ಭಾಷೆಯ ಪ್ರಬುದ್ಧತೆಯನ್ನು ಸಾರುತ್ತದೆ. ಇಂದು ಕನ್ನಡ ಸಾಹಿತ್ಯ – ಸಂಸ್ಕೃತಿ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿರುವ ಈ ಭಾಗದ ಸಾಹಿತಿ ಕಲಾವಿದರಿಗೆ ಮೂಲ ಪ್ರೇರಣೆಯೇ ಯಕ್ಷಗಾನ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ಅವರು ನಗರದ ನೆಮ್ಮದಿ ಕುಟಿರದಲ್ಲಿ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತಂಡದ ವತಿಯಿಂದ ಆಯೋಜಿಸಲಾದ ನಾಲ್ಕನೆಯ ವರ್ಷದ ವಾರ್ಷಿಕೋತ್ಸವದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ವೇದಿಕೆಯ ಮೇಲೆ ಪರಿಶುದ್ಧ ಕನ್ನಡ ಭಾಷೆಯಲ್ಲಿ ಮಾತನಾಡುವ ಏಕೈಕ ಕಲಾಮಾಧ್ಯಮ ಇದ್ದರೆ ಅದು ಯಕ್ಷಗಾನ ಮಾತ್ರ. ಯಕ್ಷಗಾನ ಕಲಾವಿದರಿಗೆ ಭರವಸೆಯ ಬೆಳಕು ನೀಡುವ ಯಕ್ಷಗೆಜ್ಜೆ ಮಾದರಿ ಸಂಸ್ಥೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗೋಡೆ ನಾರಾಯಣ ಹೆಗಡೆ ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸಿ ಅವರು ಯಕ್ಷಗಾನದಲ್ಲಿ ಭಾಗವಹಿಸಿ ಕಲೆ ಬೆಳೆಯಲು ಕಲಾಭಿಮಾನಿಗಳ ಪ್ರೋತ್ಸಾಹ ಹಾಗೂ ಪ್ರಯತ್ನ ಅಭಿನಂದನಾರ್ಹ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಯಕ್ಷಗಾನದಲ್ಲಿ ಸಾಧನಗೈದ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಮುಖ್ಯಸ್ಥೆ ನಿರ್ಮಲಾ ಹೆಗಡೆ, ಎಮ್..ಕೆ. ಹೆಗಡೆ, ಸತೀಶ್ ಹೆಗಡೆ, ಸುರೇಶ್ ಹಕ್ಕಿಮನೆ, ಯಕ್ಷಗಾನ ಕಲಾವಿದರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.