ಸಿದ್ದಾಪುರ: ಶಾಲಾ ಪಾಠ ಪಠ್ಯಗಳ ಜೊತೆಯಲ್ಲಿ ಯಾವುದೇ ಕಲೆಯನ್ನು ಅಭ್ಯಾಸ ನಡೆಸಿದಾಗ ಮಗುವಿನ ಉತ್ತಮ ಬೆಳವಣಿಗೆಗೆ ಸಹಾಯವಾಗುತ್ತದೆ. ಒತ್ತಡವೆಂದು ಪಾಲಕರು ಭಾವಿಸಬಾರದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರದ ಸಹಾಯಕ ನಿರ್ದೇಶಕರಾದ ಡಾ ರಾಮಚಂದ್ರ ಕೆ.ಎಂ ಹೇಳಿದರು.
ಅವರು ತಾಲೂಕಿನ ದುರ್ಗಾ ವಿನಾಯಕ ದೇವಸ್ಥಾನ ವಾಜಗದ್ದೆಯಲ್ಲಿ ಯಕ್ಷಚಂದನ (ರಿ) ದಂಟಕಲ್ ಸಂಸ್ಥೆಯ ಅಡಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಕಾರದಲ್ಲಿ ನಡೆಸಿದ ಯಕ್ಷಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಟಿ.ಎಸ್.ಎಸ್ ಮಾಜಿ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಮಾತನಾಡಿ ಯಾವುದೇ ವಿದ್ಯೆಯು ಒಲಿಯಬೇಕು ಅಂತಾದರೆ, ಗುರುಮುಖೇನ ಕಲಿತಾಗ ಕಲಾವಿದ ಸಮರ್ಥನಾಗಲು ಸಾಧ್ಯ ಎಂದರು. ಗುರು ಮುಖೇನ ಕಲಿತಾಗ ಯಾವುದೇ ಕಲಾವಿದನು ಸಮರ್ಥನಾಗಲು ಸಾಧ್ಯ ಎಂದರು.
ಊರಿನ ಹಿರಿಯರು ಯಕ್ಷಗಾನ ಅಭಿಮಾನಿಗಳು ಆಗಿರುವ ಗೋಪಾಲ ಹೆಗಡೆ ವಾಜಗದ್ದೆ ,ದುರ್ಗಾ ವಿನಾಯಕ ದೇವಸ್ಥಾನ ವಾಜಗದ್ದೆಯ ಮೊಕ್ತೆಸರರಾದ ಶ್ರೀಧರ ಎಂ.ಹೆಗಡೆ ಪೇಟೆಸರ ಮಾತನಾಡಿದರು.
ಯಕ್ಷಚಂದನ ಸಂಸ್ಥೆಯ ರೂವಾರಿಗಳಾದ ಸತೀಶ್ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಇಲ್ಲಿಯವರೆಗಿನ ಚಟುವಟಿಕೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಜೊತೆಯಲ್ಲಿ ಇತ್ತೀಚೆಗೆ ಅಪಘಾತದಲ್ಲಿ ಸ್ವರ್ಗಸ್ಥರಾದ ತಿಮ್ಮಪ್ಪ ಹೆಗಡೆ ಬಾಳೇಹದ್ದ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸರ್ವರೂ ಒಂದು ನಿಮಿಷ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಯಕ್ಷಚಂದನ ಸಂಸ್ಥೆಯ ಅಧ್ಯಕ್ಷರಾದ ಸುಜಾತಾ ಎಸ್ ಹೆಗಡೆ ದಂಟಕಲ್ ಸ್ವಾಗತಿಸಿ ವಂದಿಸಿದರು. ತಾಳಮದ್ದಲೆ ಅರ್ಥಧಾರಿಗಳಾದ ಶ್ರೀಪಾದ ಹೆಗಡೆ ಕಲ್ಮನೆ ಅವರು ನಿರ್ವಹಿಸಿದರು.ವೇದಿಕೆ ಕಾರ್ಯಕ್ರಮದ ನಂತರದಲ್ಲಿ ಶರಸೇತುಬಂಧ ಯಕ್ಷಗಾನ ಪ್ರದರ್ಶನಗೊಂಡಿತು.