ಮುಂಡಗೋಡ: ಕ್ಷೇತ್ರದಲ್ಲಿ ಹೆಬ್ಬಾರ್ ಬಂದ ನಂತರ ಪ್ರಜಾಪ್ರಭುತ್ವ ಅರ್ಥ ಕಳೆದುಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ. ಆಯಾ ಗ್ರಾ.ಪಂ., ತಾಲೂಕ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು ಹಂಚಬೇಕಾದ ಕೆಲಸವನ್ನು ಶಾಸಕರೇ ಮಾಡುತ್ತಿದ್ದಾರೆ. ತಾಡಪತ್ರಿ ಹಂಚಬೇಕಾದರೂ ಶಾಸಕರೇ ಇರಬೇಕು ಎಂಬ ಸ್ಥಿತಿ ಇದೆ ಎಂದು ಇತ್ತೀಚಿಗೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾದ ವಿ.ಎಸ್.ಪಾಟೀಲ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಪಕ್ಷ ಎಂದರೆ ಸಮುದ್ರವಿದ್ದಂತೆ. ಎಲ್ಲ ರೀತಿಯ ಕಾರ್ಯಕರ್ತರು ಇರುತ್ತಾರೆ. ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಾಗ ಅದಕ್ಕೆ ಮನ್ನಣೆ ನೀಡಿ ಅದರ ಸಾಧಕ ಭಾದಕಗಳನ್ನು ನೋಡಿ ಅದನ್ನು ಸರಿಪಡಿಸಬೇಕಾಗುತ್ತದೆ ಎಂದರು.
ಜನರ ಸೇವೆ ಮಾಡುವುದಕ್ಕೆ ಜನಪ್ರತಿನಿಧಿಗಳನ್ನು ಆರಿಸಬೇಕಾಗುತ್ತದೆ. ನನ್ನ ಮತಕ್ಕೆ ಎಷ್ಟು ಬೆಲೆಯೋ ಜನಸಾಮಾನ್ಯನ ಮತಕ್ಕೂ ಅಷ್ಟೇ ಬೆಲೆ ಇರುತ್ತದೆ. ನೀವು ಆಶೀರ್ವಾದ ಮಾಡಿದ್ದು ಬಡವರ ಸೇವೆ ಮಾಡಲಿಕ್ಕೆ, ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಮತ ಚಲಾವಣೆ ಮಾಡಿರುತ್ತೇವೆ. ಈಗ ಪ್ರಸ್ತುತ ಹೇಗಿದೆ ಎಂದರೆ ಊರು ಯಾವಾಗಾದರೂ ಸುಧಾರಣೆಯಾಗಲಿ, ಮೊದಲು ನಾನು ಸುಧಾರಣೆಯಾಗಬೇಕು ಎನ್ನುವ ಮನೋಭಾವನೆ ಬೆಳೆದುಬಿಟ್ಟಿದೆ. ತಾವು ಸುಧಾರಣೆಯಾದ ನಂತರ ಮತ್ತೆ ಚುನಾವಣೆಯಲ್ಲಿ ಮತದಾರನಿಗೆ ಅಷ್ಟು ಇಷ್ಟು ಕೊಟ್ಟು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೃಷ್ಣ ಹಿರಳ್ಳಿ, ಮಂಜುನಾಥ ಪಾಟೀಲ, ಎಂ.ಎನ್.ದುಂಡಶಿ, ಧರ್ಮರಾಜ ನಡಗೇರ, ಭಾರತಿ ಮಣ್ಣಪ್ಪಗೌಡರ, ಜಿ.ಪಂ ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ ಮಹ್ಮದಜಾಫರ ಹಂಡಿ, ಜ್ಞಾನದೇವ ಗುಡಿಯಾಳ, ರಜಾ ಪಠಾಣ, ರಹೀಮಬಾನು ರಾಜೇಸಾಬ ಕುಂಕೂರ, ಮಹ್ಮದಗೌಸ ಮಕಾನದಾರ, ಪ್ರದೀಪ ಶಿವನಗೌಡರ, ಶಾರದ ರಾಠೋಡ, ಬಿಬಿಜಾನ ಮುಲ್ಲಾನವರ, ವಿ.ಎಸ್.ಪಾಟೀಲರ ಕಟ್ಟಾ ಅಭಿಮಾನಿ ಬಾಷಾಸಾಬ ಹಜರೆಸಾಬ ಯಳವಟ್ಟಿ(ಪಾಳಾ) ವಾದಿರಾಜ ಅಡ್ವೆ ಸೇರಿದಂತೆ ಮುಂತಾದವರು ಇದ್ದರು.
ಪಟಾಕಿ ಸಿಡಿಸಿ ಸ್ವಾಗತ…
ಬಿಜೆಪಿಯಿಂದ ಗುರುವಾರ ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಶಾಸಕ ವಿ.ಎಸ್.ಪಾಟೀಲ ಅವರು ಶುಕ್ರವಾರ ಮುಂಡಗೋಡಗೆ ಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಹೂಮಳೆಗರೆಯುತ್ತಾ ಭವ್ಯ ಸ್ವಾಗತ ಕೋರಿದರು.
ನನ್ನ ವೈಯಕ್ತಿ ಆಸ್ತಿ ಯಾವುದೂ ಇಲ್ಲ. ನಮ್ಮ ಹಿರಿಯರ ಆಸ್ತಿಯನ್ನು ನಾವು ಅನುಭವಿಸುತ್ತಿದ್ದೇವೆ. ಬೇರೆಯವರಂತೆ ಸಾವಿರಾರು ಕೋಟಿ ಆಸ್ತಿ ಮಾಡಿಲ್ಲ. ಗುತ್ತಿಗೆ ನೀಡಿದವರಿಗೆ ನಮ್ಮದೇ ಕಡಿ (ಜೆಲ್ಲಿ ಕಲ್ಲು) ತೆಗೆದುಕೊಳ್ಳಿ, ನಮ್ಮದೇ ಎಂಸ್ಯಾoಡ್ ತೆಗೆದುಕೊಳ್ಳಿ ಎಂದು ನಾವು ಯಾವುತ್ತೂ ಹೇಳಿಲ್ಲ.
• ವಿ.ಎಸ್.ಪಾಟೀಲ, ಮಾಜಿ ಶಾಸಕ