ಯಲ್ಲಾಪುರ: ನಿಸರ್ಗ ಸಂಪತ್ತು ಬುಡಕಟ್ಟು ಜನಾಂಗವಾದ ಸಿದ್ದಿ ಸಮುದಾಯದವರಿಗೆ ಸೇರಬೇಕು. ಅವರನ್ನು ಎಂದಿಗೂ ಅರಣ್ಯದಿಂದ ಒಕ್ಕಲೆಬ್ಬಿಸಲಾಗದು ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಅವರು ಶುಕ್ರವಾರ ತಾಲೂಕಿನ ಮಾಗೋಡ ಕಾಲನಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ಸಂಯುಕ್ತ ಆಶ್ರಯದಲ್ಲಿ ವಾಲ್ಮೀಕಿ ಪ್ರಶಸ್ತಿ ಪಡೆದ ಲಕ್ಷ್ಮೀ ಗಣಪತಿ ಸಿದ್ದಿ ವೇದಿಕೆಯಲ್ಲಿ ಸಿದ್ದಿ ಸಮುದಾಯದವರೊಂದಿಗೆ ಸಂವಾದ ಮತ್ತು ಸರ್ಕಾರದ ಸವಲತ್ತುಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿದ್ದಿ ಜನಾಂಗದವರು ಪ್ರಕೃತಿಯನ್ನು ದೇವರಂತೆ ಪೂಜಿಸುತ್ತಾರೆ, ಅವರಿಗೆ ಅಲ್ಲಿಯೇ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಲಾಗುವುದು. ಪೋರ್ಚುಗೀಸರ ಅವಧಿಯಲ್ಲಿ ಗುಲಾಮರಾಗಿ ಆಗಮಿಸಿದ ಸಿದ್ದಿ ಜನಾಂಗದವರು ಇಂದು ನಿಷ್ಠಾವಂತ ಭಾರತೀಯ ಪ್ರಜೆಗಳಾಗಿದ್ದಾರೆ. ಹಿಂದೂ ಮುಸ್ಲಿಂ, ಕ್ರೈಸ್ತ ಧರ್ಮ ಮತಗಳಿಗೆ ಸೇರಿರುವ ಸಿದ್ದಿ ಜನಾಂಗದವರು ಒಂದೇ ತಾಯಿಯ ಮಕ್ಕಳಂತೆ ಆದರ್ಶವಾಗಿ ಬದುಕು ಸಾಗಿಸಿ, ಇತರರಿಗೆ ಮಾದರಿಯಾಗಿದ್ದಾರೆ. ತಮ್ಮ ಪರಂಪರಾಗತ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಬುಡಕಟ್ಟು ಜನಾಂಗಕ್ಕೆ ಸೇರಿರುವ ಶಾಂತರಾಮ ಸಿದ್ದಿಯವರನ್ನು ಬಿಜೆಪಿ ಪಕ್ಷ ವಿಧಾನ ಪರಿಷತ್ ಸದಸ್ಯರನ್ನಾಗಿಸಿದೆ. ಇದರಿಂದ ಬಿಜೆಪಿ ಪಕ್ಷಕ್ಕೆ ಬಡಕಟ್ಟು ಜನಾಂಗದ ಬಗ್ಗೆ ಎಷ್ಟು ಕಾಳಜಿ ಇದೆ ಎನ್ನುವುದು ತಿಳಿಯುತ್ತದೆ. ಮುರಾರ್ಜಿ, ಕಿತ್ತೂರು ಚೆನ್ನಮ್ಮ, ಅಟಲ್ ಜಿ, ಅಂಬೇಡ್ಕರ್, ಇಂದಿರಾ ಗಾಂಧಿ ವಸತಿ ಶಾಲೆಗಳಂತೆಯೇ ಇಲ್ಲಿಯ ಸಿದ್ದಿ ಜನಾಂಗದ ಮಕ್ಕಳಿಗಾಗಿ ಸಿದ್ದಿ ವಸತಿ ಶಾಲೆಯೊಂದನ್ನು ಆಧುನಿಕ ಶಿಕ್ಷಣ ಪದ್ಧತಿಯಂತೆ ಪ್ರಾರಂಭಿಸಲಾಗುವುದು ಎಂದು ಅವರು ಆಶ್ವಾಸನೆ ನೀಡಿದರು.
ಇಲ್ಲಿ ಬಹಳಷ್ಟು ಸಿದ್ದಿ ಕುಟುಂಬದವರಿಗೆ ಮನೆ ಇಲ್ಲ, ಉದ್ಯೋಗ ವ್ಯವಹಾರ ಮಾಡಲು ನೇರವಾಗಿ ಸಾಲ ಸಿಗುತ್ತಿಲ್ಲ, ಇಂಥಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಮುಂದಿನ ದಿನಗಳಲ್ಲಿ ಅಗತ್ಯ ಇರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಕೇಂದ್ರದ ಮೋದಿ ಸರ್ಕಾರ ಹಾಗೂ ರಾಜ್ಯದ ಬೊಮ್ಮಾಯಿ ಸರ್ಕಾರ ಪರಿಶಿಷ್ಟ ಜನಾಂಗಕ್ಕೆ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಏರಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಒಟ್ಟು ಶೇ.24 ಮೀಸಲಾತಿ ಏರಿಕೆಯಾಗಿದೆ. ಇದರಿಂದಾಗಿ ಪರಿಶಿಷ್ಟ ಪಂಗಡಗಳ ಜನರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಪಡೆದುಕೊಳ್ಳಲು ಸಹಾಯವಾಗಲಿದೆ. ಎಲ್ಲರೂ ಸೇರಿ ಸಿದ್ಧಿ ಸಮುದಾಯದವರ ಅಭಿವೃದ್ಧಿಗೆ ಕೆಲಸ ಮಾಡಬೇಕಾಗಿದೆ. ನೀವು ಬೆಳೆದ ಯಾವುದೇ ಬೆಳೆ ಅಥವಾ ಗುಡಿ ಕೈಗಾರಿಕೆ ವಸ್ತುಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಸರ್ಕಾರ ಮಾಡಲಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮಾದರಿಯನ್ನಾಗಿರಿಸಿಕೊಂಡು ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮತ್ತು ನೀಡಬೇಕು ಎಂದು ಶ್ರೀರಾಮುಲು ಕರೆ ನೀಡಿದರು.