ಹೊನ್ನಾವರ: ರಾಮಕ್ಷತ್ರಿಯ ಸಮಾಜದ ವತಿಯಿಂದ ಡಿ.10ರಿಂದ 16ರವರೆಗೆ ಕೋಟಿ ರಾಮತಾರಕ ಮಂತ್ರ ಪಠಣ ನಡೆಯಲಿದೆ ಎಂದು ಸಮಾಜದ ಕಾರ್ಯಸಂಚಾಲಕ ಎಮ್.ಆರ್.ನಾಯ್ಕ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಕ್ಷತ್ರಿಯ ಸಮಾಜದ ಕುಲಗುರುಗಳಾದ ಸ್ವರ್ಣವಲ್ಲಿಯ ಗಂಗಾಧರೇ0ದ್ರ ಸರಸ್ವತೀ ಸ್ವಾಮೀಜಿಯವರು ಮಂಕಿಯಲ್ಲಿ 2019ರಲ್ಲಿ ನಡೆದ ಬೃಹತ್ ಸಮಾವೇಶದ ಸಂದರ್ಭದಲ್ಲಿ ಪ್ರತಿವರ್ಷ ರಾಮತಾರಕ ಮಂತ್ರ ಪಠಿಸಲು ತಿಳಿಸಿದಂತೆ ಪ್ರತಿವರ್ಷ ಪಠಣ ಮಾಡುತ್ತಾ ಬಂದಿದ್ದೇವೆ. ಈ ವರ್ಷವು ರಾಮಕ್ಷತ್ರಿಯ ಸಮಾಜದ ಅಭಿವೃದ್ಧಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಿಂದ ಸಮಾಜದಲ್ಲಿ ಧಾರ್ಮಿಕತೆ ಬೆಳೆಯಲಿದೆ. ಸಮಾಜದ ಪ್ರತಿಯೊಬ್ಬರೂ ರಾಮತಾರಕ ಮಂತ್ರ ಪಠಣವನ್ನು ಡಿ.10ರಿಂದ 16ರವರೆಗೆ ತಮ್ಮ ಮನೆಯಲ್ಲಿ ಪಠಣ ಮಾಡುವಂತೆ ಮನವಿ ಮಾಡಿದರು.
ರಾಮಕ್ಷತ್ರಿಯ ಸೀಮಾ ಪರಿಷತ್ ಮುಖಂಡರಾದ ಆನಂದ ನಾಯ್ಕ ಮಾತನಾಡಿ, ಪ್ರತಿದಿನ 1300 ಮಂತ್ರ ಪಠಣ ಮಾಡಲು ನಿಶ್ಚಯಿಸಲಾಗಿದ್ದು, ಒಂದು ವಾರದ ಕಾಲ ಪಠಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀಸ್ವರ್ಣವಲ್ಲೀ ಪರಿಷತ್ ಅಧ್ಯಕ್ಷ ಶ್ರೀನಿವಾಸ ನಾಯ್ಕ, ಪ್ರಧಾನ ಕಾರ್ಯದರ್ಶಿ ರಾಜೇಶ ಸಾಲೇಹಿತ್ತಲ್, ಸದಸ್ಯರಾದ ಕರ್ನಲ್ ಪಿ.ಎಂ.ನಾಯ್ಕ, ಮೋಹನ ಸಾಲೇಹಿತಲ್ ಮತ್ತಿತರರು ಇದ್ದರು.