ಉಡುಪಿ: ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಎಲ್ಲಾ ನಿಗಮಗಳ 17 ಸಾವಿರಕ್ಕಿಂತ ಹೆಚ್ಚಿನ ಅರ್ಹ ಬಡ ಫಲಾನುಭವಿಗಳಿಗೆ ಉಚಿತ ಕೊಳವೆಬಾವಿಗಳನ್ನು ಡಿಬಿಟಿ ಮೂಲಕ ಒದಗಿಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಇಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳ ಯೋಜನೆಗಳ ಪ್ರಗತಿ ಪರಾಮರ್ಶೆಯ ವೀಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ, ರಾಜ್ಯದ ಬಡ ಫಲಾನುಭವಿಗಳಿಗೆ ಉಚಿತವಾಗಿ ಕೊಳವೆಬಾವಿ ಕೊರೆಸಿ, ಪಂಪು ಮೋಟಾರು ಮತ್ತು ವಿದ್ಯುತ್ ಸಂಪರ್ಕ ಒದಗಿಸಿ, ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಯವರು ಸೂಚಿಸಿದ್ದು, ಈ ನಿಟ್ಟಿನಲ್ಲಿ ಶಾಸಕರು, ಹಿರಿಯ ಅಧಿಕಾರಿಗಳು, ವಿವಿಧ ನಿಗಮಗಳ ಜಿಲ್ಲಾ ವ್ಯವಸ್ಥಾಪಕರು ಕೂಡಲೇ ಕಾರ್ಯೋನ್ಮುಖರಾಗಿ, ಅರ್ಹ ಬಡ ಫಲಾನುಭವಿಗಳ ಆಯ್ಕೆ ಪಟ್ಟಿ ಸಿದ್ಧಪಡಿಸಬೇಕು ಎಂದು ಸೂಚಿಸಿದರು.
ಬಡ ಫಲಾನುಭವಿಗಳಿಗೆ ನೆರವಾಗುವುದು ರಾಜ್ಯ ಸರ್ಕಾರದ ಉದ್ದೇಶವಾಗಿದ್ದು, ನೇರ ನಗದು ವರ್ಗಾವಣೆ- ಡಿಬಿಟಿ ಮೂಲಕ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಹಾಗೂ ಪಾರದರ್ಶಕತೆ ಕಾಪಾಡಲು ಅಧಿಕಾರಿಗಳು ಆದ್ಯತೆ ಮೇರೆಗೆ ಕೆಲಸ ನಿರ್ವಹಿಸಬೇಕೆಂದು ಸಚಿವರು ಸೂಚಿಸಿದರು. ಗಂಗಾ ಕಲ್ಯಾಣ ಯೋಜನೆಯಡಿ, ಕೊಳವೆಬಾವಿ ಕೊರೆಸುವುದು, ಪಂಪ್ ಮೋಟಾರು ಅಳವಡಿಕೆ ಮತ್ತು ವಿದ್ಯುತ್ ಸಂಪರ್ಕ ಅಳವಡಿಕೆಯ ಪ್ರಗತಿ ಪರಾಮರ್ಶೆ ನಡೆಸಿ, ಈ ಹಿಂದಿನ ಎಲ್ಲ ಬಾಕಿ ಕಾಮಗಾರಿಗಳನ್ನು ಜನವರಿ ಮೊದಲ ವಾರದೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು ಹಾಗೂ ಕರ್ತವ್ಯ ನಿರ್ಲಕ್ಷತೆ ತೋರುವ ಅಧಿಕಾರಿ, ಸಿಬ್ಬಂದಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರಗಿಸುವುದಾಗಿ ಎಚ್ಚರಿಕೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಅಭಿವೃದ್ಧಿ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳ ಆಯ್ಕೆಗೆ ಇರುವ ವಯಸ್ಸಿನ ಮಿತಿಯನ್ನು ರದ್ದು ಮಾಡಲಾಗುವುದು. 60 ವರ್ಷ ಇದ್ದ ವಯೋಮಿತಿ ತೆಗೆದುಹಾಕಿ ಇನ್ನು ಕೆಲವೇ ದಿನಗಳಲ್ಲಿ ಆದೇಶ ಹೊರಡಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಶ್, ಒಕ್ಕಲಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಕೃಷ್ಣಪ್ಪ, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರುಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.