ಕಾರವಾರ: ಉತ್ತರ ಕನ್ನಡ ಜಿಲ್ಲಾ ಕುಸ್ತಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ನಗರ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಜಯ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರೂ ಆಗಿರುವ ದಿಲೀಪ್ ಅರ್ಗೇಕರ್ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷರನ್ನಾಗಿ ಸುಭಾಶ್ ಗುನಗಿ ಅವರನ್ನ ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯ ಕುಸ್ತಿ ಫೆಡರೇಷನ್ ಹೊಸ ಸಮಿತಿ ಆಯ್ಕೆಯಾಗಿದ್ದು, ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕಗಳು ಸಹ ಅಸ್ತಿತ್ವಕ್ಕೆ ಬಂದಿದೆ. ನಗರ ಘಟಕದ ಉಪಾಧ್ಯಕ್ಷರಾಗಿ ಮೋಹನ್ ಉಳ್ವೇಕರ್, ಪ್ರಧಾನ ಕಾರ್ಯದರ್ಶಿಯಾಗಿ ರೋಶನ್ ಹರಿಕಂತ್ರ, ಜಂಟಿ ಕಾರ್ಯದರ್ಶಿಯಾಗಿ ಗೋಪಾಲ ಗೌಡ, ಖಜಾಂಚಿಯಾಗಿ ಸುನೀಲ್ ತಾಂಡೇಲ, ಸದಸ್ಯರಾಗಿ ಸಮೀರ ಶೇಜವಾಡಕರ್ ಹಾಗೂ ಯಂಕು ಗೌಡರನ್ನು ನೇಮಕ ಮಾಡಲಾಗಿದೆ.
ಗ್ರಾಮೀಣ ಘಟಕದ ಉಪಾಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ತಾಂಡೇಲ, ಜಂಟಿ ಕಾರ್ಯದರ್ಶಿಯಾಗಿ ಗಣರಾಜ ಟಾಕೇರ, ಖಜಾಂಚಿಯಾಗಿ ರಾಜೇಶ್ ತಾಂಡೇಲ, ಸದಸ್ಯರಾಗಿ ಗಣೇಶ ಗಾಂವಕರ ಹಾಗೂ ಸುದೇಶ ನಾಯ್ಕರನ್ನು ನೇಮಕ ಮಾಡಲಾಗಿದೆ. ನಗರ ಹಾಗೂ ಗ್ರಾಮೀಣ ಘಟಕದ ಪದಾಧಿಕಾರಿಗಳು ಜಿಲ್ಲೆಯಲ್ಲಿ ಕುಸ್ತಿ ಬೆಳವಣಿಗೆಗೆ ಶ್ರಮಿಸುವಂತೆ ರಾಜ್ಯ ಘಟಕ ಸೂಚಿಸಿದೆ.
ರಾಜ್ಯಾಧ್ಯಕ್ಷರಾಗಿ ಗುಣರಂಜನ್ ಶೆಟ್ಟಿ ಅವಿರೋಧ ಆಯ್ಕೆ
ಕರ್ನಾಟಕ ರಾಜ್ಯ ಕುಸ್ತಿ ಫೆಡರೇಷನ್ಗೆ 2022ರಿಂದ 2026ರವರೆಗಿನ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ನೂತನ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಸ್ತಿ ಫೆಡರೇಷನ್ ಆಫ್ ಇಂಡಿಯಾದ ಮೇಲುಸ್ತುವಾರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಕುಸ್ತಿ ಫೆಡರೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಸಮಿತಿಯ ಮೇಲುಸ್ತವಾರಿ ಜಿ.ಎಸ್.ಪ್ರಸೂದ್ ಮಾತನಾಡಿ, ಕಳೆದ 50 ವಷÀðಗಳಿಂದ ರಾಜ್ಯದಲ್ಲಿ ಕುಸ್ತಿಪಟುಗಳ ಅಭ್ಯುದಯಕ್ಕಾಗಿ ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಯಿತು. ಈ ಸಮಿತಿಯು 21 ದಿನಗಳ ಕಾಲ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ದೇಶದ ಕುಸ್ತಿ ಕ್ಷೇತ್ರಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಾ ಬಂದಿರುವ ಕರ್ನಾಟಕ ರಾಜ್ಯಕ್ಕೆ ಹೊಸ ಉತ್ಸಾಹಿ ಸಮಿತಿಯು ಆಯ್ಕೆಯಾಗಿರುವುದು ಸಂತಸದ ವಿಷಯವಾಗಿದೆ ಎಂದರು.
ನೂತನವಾಗಿ ರಾಜ್ಯ ಕುಸ್ತಿ ಫೆಡರೇಶನ್ ಅಧ್ಯಕ್ಷರಾದ ಗುಣರಂಜನ್ ಶೆಟ್ಟಿ ಹಾಗೂ ಸಂಘದ ಎಲ್ಲಾ ಸದಸ್ಯರಿಗೆ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಅಭಿನಂದಿಸಲಾಯಿತು.